ವಿದೇಶ

ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿನ ವಿದೇಶಿಗರಿಗೆ ಚೀನಾ ಪ್ರವೇಶಕ್ಕೆ ನಿರ್ಬಂಧ

Nagaraja AB

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ಕಾಯಿಲೆಯ ಕಾರಣದಿಂದ ಭಾರತದಲ್ಲಿನ ವಿದೇಶಿ ಪ್ರಜೆಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಚೀನಾ ನಿರ್ಧರಿಸಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಹೇಳಿದ್ದಾರೆ.

ಚೀನಾ ರಾಯಭಾರಿ ಘೋಷಿಸಿರುವ ಈ ಕ್ರಮ ತಾತ್ಕಾಲಿಕವಾಗಿದ್ದು, ನಿರ್ದಿಷ್ಟವಾಗಿ ಭಾರತಕ್ಕೆ ಮಾತ್ರ ಅಲ್ಲ, ಇನ್ನಿತರ ರಾಷ್ಟ್ರಗಳಿಗೂ ಈ ಕ್ರಮ ಅನ್ವಯಿಸಲಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

ಕೋವಿಡ್-19 ಕಾರಣ ಮಾನ್ಯತೆ ಪಡೆದಿರುವ ಚೀನಾ ವೀಸಾ ಅಥವಾ ವಸತಿ ಅನುಮತಿ ಹೊಂದಿರುವ ಭಾರತದಲ್ಲಿನ ವಿದೇಶಿಗರ ಚೀನಾ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಚೀನಾ ರಾಯಭಾರಿ ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ವೀಸಾಗಳನ್ನು ಮಾತ್ರ ತಾತ್ಕಾಲಿಕವಾಗಿ ಅಮಾನತುಗೊಳಿಲಾಗುತ್ತಿದೆ. ಮುಂದಿನ ವೀಸಾ ಅರ್ಜಿಗಳನ್ನು ನಿಷೇಧಿಸಲಾಗಿಲ್ಲ ಎಂದು ನೋಟಿಸ್ ಸೂಚಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನವೆಂಬರ್ 3 ರ ನಂತರ ನೀಡಲಾಗುವ ವೀಸಾಗಳು ಚೀನಾಕ್ಕೆ ಪ್ರಯಾಣಿಸಲು ಮಾನ್ಯವಾಗಿವೆ ಎನ್ನಲಾಗಿದೆ.

ಸಂಭಾವ್ಯ ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೀನಾ ಈ ಕ್ರಮಕ್ಕೆ ಮುಂದಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT