ವಿದೇಶ

ರಷ್ಯಾ ಅಧ್ಯಕ್ಷ ಪುಟಿನ್ ಗೆ ಪಾರ್ಕಿನ್ ಸನ್ ಕಾಯಿಲೆ.. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..?

Srinivasamurthy VN

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಪಾರ್ಕಿನ್ ಸನ್ ಕಾಯಿಲೆ ಕಾಣಿಸಿಕೊಂಡಿದ್ದು ಜನವರಿಯಲ್ಲಿ ತಮ್ಮ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅನಿರೀಕ್ಷಿತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರೀಕ್ಷೆಯಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಪುಟಿನ್, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಅವರ ಕುಟುಂಬ ಸದಸ್ಯರು  ಹಾಗೂ ವೈದ್ಯರು ಒತ್ತಡ ಹೇರುತ್ತಿದ್ದಾರೆ ಎಂದು ರಷ್ಯಾದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.

68 ವರ್ಷದ ಪುಟಿನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷ ಪದವಿಯಂತಹ ಮಹತ್ವದ ಸ್ಥಾನ ನಿಭಾಯಿಸುವುದು ಸರಿಯಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಜೀವಿತಾವಧಿಯ ಅಧ್ಯಕ್ಷರಾಗಿ ಮುಂದುವರಿಯಲು ಸಂವಿಧಾನ ತಿದ್ದುಪಡಿ ಮಾಡಿಕೊಂಡಿರುವ ಕಾರಣ,  ಅವರು ಮನೆಯಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಕಾಯಿಲೆ ಹೆಚ್ಚು ತೊಂದರೆ ಉಂಟುಮಾಡುವ ಸಾಧ್ಯತೆಯಿದ್ದು, ಈ ಕಾರಣದಿಂದ ಪುಟಿನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಕಳೆದ 20 ವರ್ಷಗಳಿಂದ ರಷ್ಯಾ ದೇಶವನ್ನು ಏಕಚಕ್ರಾಧಿಪತಿಯಂತೆ ಆಡಳಿತ ನಡೆಸುತ್ತಿರುವ ಪುಟಿನ್, 2000 ರಿಂದ 2008 ರವರೆಗೆ ಅಧ್ಯಕ್ಷರಾಗಿ, 2012 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ನಂತರ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಾಂವಿದಾನಕ್ಕೆ ದೊಡ್ಡ ಪ್ರಮಾಣದ ತಿದ್ದುಪಡಿ  ತಂದು ಜೀವಿತಾವಧಿ ಪೂರ್ಣ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಂಡಿದ್ದಾರೆ. ಪುಟಿನ್ ಅವರ ಪ್ರಸ್ತುತ ಅವಧಿ 2024 ರಲ್ಲಿ ಕೊನೆಗೊಳ್ಳುತ್ತದೆ. ರಷ್ಯಾದ ಸಂಸತ್ತು ಇತ್ತೀಚೆಗೆ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಿದ್ದು, ಅವರಿಗೆ ಇನ್ನೂ 12 ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲು  ಅನುವು ಮಾಡಿಕೊಡಲಿದೆ. ಮಾಜಿ ಕೆಜಿಬಿ ಅಧಿಕಾರಿಯಾಗಿರುವ ವ್ಲಾಡಿಮಿರ್ ಪುಟಿನ್ 20 ವರ್ಷಗಳಿಂದ ರಷ್ಯಾದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ.

ಸೋವಿಯತ್ ಒಕ್ಕೂಟ (ಯುಎಸ್ಎಸ್ಆರ್) ವಿಭಜನೆಗೊಂಡ ನಂತರ ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ದೇಶವನ್ನು ಮುನ್ನಡೆಸುವಲ್ಲಿ ಪುಟಿನ್ ಯಶಸ್ವಿಯಾಗಿದ್ದಾರೆ. ದೇಶದ ರಾಜಕೀಯ ಪರಿಸ್ಥಿತಿಯಿಂದಾಗಿ, ಅವರು ಕನಿಷ್ಠ ಪ್ರತಿರೋಧವಿಲ್ಲದೆ ಸಂಸತ್ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದಾರೆ. ಇಂತಹ ಸಮಯದಲ್ಲಿ, ಪುಟಿನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ ಎಂಬ ಸುದ್ದಿ ಆ ದೇಶದ ಜನರನ್ನು ಚಿಂತೆಗೀಡುಮಾಡಿದೆ. ಅವರ ಅಭಿಮಾನಿಗಳು ಈ ಸುದ್ದಿಗಳಿಂದ ತೀವ್ರ ಬೇಸರಗೊಂಡಿದ್ದಾರೆ.

SCROLL FOR NEXT