ಜೋ ಬೈಡನ್ 
ವಿದೇಶ

ಜೊ ಬೈಡನ್: ಅತ್ಯಂತ ಕಿರಿಯ ಸೆನೆಟರ್ ನಿಂದ ಅತಿ ಹಿರಿಯ ಅಮೆರಿಕ ಅಧ್ಯಕ್ಷನವರೆಗೆ ಸಾಗಿಬಂದ ಹಾದಿ

ಅಮೆರಿಕದ 46ನೇ ಅಧ್ಯಕ್ಷರಾಗಿ ಶ್ವೇತಭವನದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು ಹೊರಟಿದ್ದಾರೆ 77 ವರ್ಷದ ಹಿರಿಯ ರಾಜಕಾರಣಿ ಜೊ ಬೈಡನ್. 

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಶ್ವೇತಭವನದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು ಹೊರಟಿದ್ದಾರೆ 77 ವರ್ಷದ ಹಿರಿಯ ರಾಜಕಾರಣಿ ಜೊ ಬೈಡನ್. 

ಸರಿಸುಮಾರು 5 ದಶಕಗಳಿಂದ ಅಮೆರಿಕ ರಾಜಕೀಯದಲ್ಲಿ ಮಿಂದೆದ್ದು ಪಳಗಿದವರು. ಯುವ ಸೆನೆಟರ್ ನಿಂದ ಹಿಡಿದು ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗುವವರೆಗೆ ಅವರ ಪಯಣ ರೋಚಕ. 

1988 ಮತ್ತು 2008ರಲ್ಲಿ ಎರಡು ಬಾರಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಲು ಹೊರಟು ಯಶಸ್ಸು ಕಾಣದೆ ಡೆಮಾಕ್ರಟಿಕ್ ಪಕ್ಷದಿಂದ ಆರು ಬಾರಿ ಸೆನೆಟರ್ ಆಗಿ ನಂತರ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 

ಅಮೆರಿಕದ ಡೆಲವರೆ ರಾಜ್ಯದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಜೊ ಬೈಡನ್ ಬಾಲಕನಿದ್ದಾಗಲೇ ಅಧ್ಯಕ್ಷ ಪದವಿ ಮೇಲೆ ಕನಸು ಕಂಡಿದ್ದರಂತೆ. ಮೂರನೇ ಬಾರಿ ಸೌತ್ ಕ್ಯಾರೊಲಿನಾ ಕ್ಷೇತ್ರದಿಂದ ಗೆದ್ದು ಸೆನೆಟರ್ ಆದ ಬಳಿಕ ಅಧ್ಯಕ್ಷ ಪದವಿಯ ಮೇಲಿನ ಭರವಸೆ ಹೆಚ್ಚುತ್ತಾ ಹೋಯಿತು. ವಾಷಿಂಗ್ಟನ್ ರಾಜ್ಯದಲ್ಲಿರುವವರಿಗೆ ಜೊ ಬೈಡನ್ ಚಿರಪರಿಚಿತ ಮುಖ. ಹಿಂದೆ ಬರಾಕ್ ಒಬಾಮಾ ಸರ್ಕಾರದಲ್ಲಿ ಎರಡು ಬಾರಿ ಕೂಡ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಉತ್ತಮ ಬದಲಿ ಆಯ್ಕೆ ಎಂದು ಅಮೆರಿಕನ್ನರು ಭಾವಿಸಿದಂತಿದೆ.

ಅಮೆರಿಕದ ಆತ್ಮವನ್ನು ಮತ್ತೆ ಸ್ಥಾಪಿಸುತ್ತೇನೆ, ಅಮೆರಿಕನ್ನರ ಬಾಳಿಗೆ ಬೆಳಕಾಗುತ್ತೇನೆ ಎಂದೇ ಕಳೆದ ವರ್ಷ ಆಗಸ್ಟ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾದಾಗ ಹೇಳಿಕೊಂಡಿದ್ದರು.

ಈಗಿನ ಅಧ್ಯಕ್ಷರು ಅಮೆರಿಕವನ್ನು ಕತ್ತಲೆಯಲ್ಲಿ ಮುಚ್ಚಿಹಾಕಿದ್ದಾರೆ. ತುಂಬಾ ಕೋಪ. ತುಂಬಾ ಭಯ. ತುಂಬಾ ವಿಭಜನೆಯನ್ನು ಅಮೆರಿಕ ಕಾಣುತ್ತಿದೆ. ನೀವು ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಸಿದರೆ, ಉತ್ತಮವಾದದ್ದನ್ನು ನೀಡುತ್ತೇನೆ, ಉತ್ತಮವಾದದ್ದನ್ನು ಸೆಳೆಯುತ್ತೇನೆ, ಕೆಟ್ಟದ್ದಲ್ಲ. ನಾನು ಬೆಳಕಿನ ಮಿತ್ರನಾಗುತ್ತೇನೆ ಹೊರತು ಕತ್ತಲೆಗಲ್ಲ ಎಂದು ಜೊ ಬೈಡನ್ ಹೇಳಿಕೊಂಡು ಬಂದಿದ್ದರು.

ಡೆಲವರೆ ರಾಜ್ಯದಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ಸೆನೆಟರ್ ಆಗಿದ್ದಾಗ ಮತ್ತು 8 ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದ ಸಮಯದಲ್ಲಿ ಭಾರತ-ಅಮೆರಿಕ ಸಂಬಂಧ ಬಲವರ್ಧನೆಗೆ ಪ್ರೋತ್ಸಾಹಿಸಿದ್ದರು. ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಹಾಗೂ 500 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರದ ಗುರಿಯನ್ನು ಸ್ಥಾಪಿಸಲು ಭಾರತ ಸರ್ಕಾರದೊಂದಿಗೆ ಬೈಡನ್ ಬಲವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಇದು ಭಾರತೀಯ ಅಮೆರಿಕನ್ನರಿಗೆ ಬೈಡನ್ ಮೇಲೆ ವಿಶ್ವಾಸ ಮೂಡಲು ನೆರವಾಯಿತು ಎನ್ನಬಹುದು.

ಕಳೆದ ಜುಲೈಯಲ್ಲಿ ಧನಸಂಗ್ರಹ ಕಾರ್ಯಕ್ರಮವೊಂದರಲ್ಲಿ ಬೈಡನ್, ಭಾರತ ಮತ್ತು ಅಮೆರಿಕ ಸಹಜ ಸಹಭಾಗಿಗಳು ಎಂದು ಹೇಳಿದ್ದರು. ಈ ಕಾರ್ಯತಂತ್ರ ಸಹಭಾಗಿತ್ವ ನಮ್ಮ ಭದ್ರತೆಗೆ ಅತ್ಯಂತ ಮುಖ್ಯವಾಗಿದೆ ಎಂದು ಸಹ ಬೈಡನ್ ಹೇಳಿದ್ದರು. ತಾವು ಉಪಾಧ್ಯಕ್ಷರಾಗಿದ್ದಾಗ ಮಾಡಿಕೊಂಡ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಅತ್ಯಂತ ದೊಡ್ಡ ಒಪ್ಪಂದವಾಗಿತ್ತು. ನಮ್ಮ ಸಂಬಂಧದಲ್ಲಿ ಹೆಚ್ಚಿನ ಪ್ರಗತಿಗೆ ಬಾಗಿಲು ತೆರೆಯಲು ಸಹಾಯ ಮಾಡುವುದು ಮತ್ತು ಭಾರತದೊಂದಿಗಿನ ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದು ಒಬಾಮಾ-ನನ್ನ ಆಡಳಿತದಲ್ಲಿ ಹೆಚ್ಚಿನ ಆದ್ಯತೆಯಾಗಿತ್ತು ಮತ್ತು ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಪ್ರಚಾರದ ವೇಳೆ ಹೇಳಿದ್ದರು.

ಬೈಡನ್ ಹುಟ್ಟು: ಜೊ ಬೈಡನ್ ಹುಟ್ಟಿದ್ದು 1942ರಲ್ಲಿ ಪೆನ್ಸಿಲ್ವೇನಿಯಾದ ಕ್ಯಾಥೊಲಿಕ್ ಕುಟುಂಬದಲ್ಲಿ ಜೋಸೆಫ್ ಆರ್. ಬಿಡೆನ್  ಮತ್ತು ಕ್ಯಾಥರೀನ್ ಯುಜೆನಿಯಾ ಫಿನ್ನೆಗನ್ ದಂಪತಿಗೆ. ಡೆಲವರೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ 1968ರಲ್ಲಿ ಸಿರಕುಸೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದರು. ಡೆಲವರೆ ರಾಜ್ಯದಿಂದ 1972ರಲ್ಲಿ ಮೊದಲ ಬಾರಿಗೆ ಸೆನೆಟರ್ ಆಗಿ ಆಯ್ಕೆಯಾಗಿ ನಂತರ 6 ಬಾರಿ ಇದೇ ರಾಜ್ಯದಿಂದ ಗೆದ್ದು ಸೆನೆಟರ್ ಆಗಿ ಸೇವೆ ಸಲ್ಲಿಸಿದರು. 29ನೇ ವಯಸ್ಸಿನಲ್ಲಿ ಅಮೆರಿಕ ಸೆನೆಟ್ ಗೆ ಆಯ್ಕೆಯಾದ ಅತ್ಯಂತ ಯುವ ರಾಜಕಾರಣಿ ಎಂಬ ಹೆಗ್ಗಳಿಕೆ ಕೂಡ ಇವರದ್ದೆ. 

ಈ ಹಿಂದೆ 1988 ಮತ್ತು 2008ರಲ್ಲಿ ಅಮೆರಿಕ ಅಧ್ಯಕ್ಷೀಯ ಪದವಿ ಹುದ್ದೆಗೆ ಸ್ಪರ್ಧಿಸಲು ಅವರು ಬಯಸಿದ್ದರೂ ಪ್ರೋತ್ಸಾಹ, ಬೆಂಬಲ ಸಿಕ್ಕಿರಲಿಲ್ಲ. ಈ ಬಾರಿ ಸಿಕ್ಕಿತು, ಅದರಲ್ಲೂ ಕಪ್ಪು ಜನಾಂಗದವರ ಬೆಂಬಲ ಸಾಕಷ್ಟು ಈ ಬಾರಿ ಸಿಕ್ಕಿದೆ. 

ತಮ್ಮ ಕುಟುಂಬದ ವಿಷಯ, ಕುಟುಂಬಕ್ಕೆ ಎದುರಾದ ಆಘಾತವನ್ನು ಬೈಡನ್ ಮುಕ್ತವಾಗಿ ಮಾತನಾಡುತ್ತಾರೆ. 1972ರಲ್ಲಿ ನಡೆದ ಕಾರು ಅಪಘಾತದಲ್ಲಿ ಬೈಡನ್ ಅವರ ಮೊದಲ ಪತ್ನಿ ನೈಲಿಯಾ ಮತ್ತು 13 ತಿಂಗಳ ಮಗಳು ನಯೊಮಿ ಮೃತಪಟ್ಟರೆ, ಪುತ್ರರಾದ ಬ್ಯೂ ಮತ್ತು ಹಂಟರ್ ತೀವ್ರವಾಗಿ ಗಾಯಗೊಂಡಿದ್ದರು. 

ನಂತರ ಒಬ್ಬಂಟಿಯಾದ ಬೈಡನ್ ಎರಡನೇ ಪತ್ನಿ ಜಿಲ್ಲ್ ಜಾಕೊಬ್ಸ್ ರನ್ನು ಭೇಟಿ ಮಾಡಿದ್ದು 1975ರಲ್ಲಿ, ನಂತರ 1977ರ ಜೂನ್ ನಲ್ಲಿ ಇಬ್ಬರೂ ವಿವಾಹವಾದರು. ಅವರಿಗೆ ಒಬ್ಬ ಮಗಳು ಅಶ್ಲೆ 1981ರಲ್ಲಿ ಜನಿಸಿದಳು.

2015ರಲ್ಲಿ ಮಗ ಬ್ಯೂ, ಮೆದುಳಿನ ಸಮಸ್ಯೆಯಿಂದ 46ನೇ ವರ್ಷದಲ್ಲಿ ತೀರಿಕೊಂಡರು, ಮತ್ತೊಬ್ಬ ಮಗ ಹಂಟರ್ ಡ್ರಗ್ ದಾಸನಾದ. ಸ್ವತಃ ಬೈಡನ್ ಅವರಿಗೆ 1988ರಲ್ಲಿ ಎರಡು ಬಾರಿ ಆರೋಗ್ಯ ಸಮಸ್ಯೆ ಮೆದುಳಿನ ತೊಂದರೆ ಕಾಣಿಸಿಕೊಂಡಿತು. ಇದನ್ನು ಕೂಡ ತಮ್ಮ ಪ್ರಚಾರದ ವೇಳೆ ಪ್ರಸ್ತಾಪಿಸಿ ಆರೋಗ್ಯ ನನ್ನ ವೈಯಕ್ತಿಕ ಕಾಳಜಿ ವಿಷಯ ಎಂದಿದ್ದರು. 

ಕಳೆದ ಏಪ್ರಿಲ್ ನಲ್ಲಿ ತಮ್ಮ ಕೊನೆಯ ಪ್ರತಿಸ್ಪರ್ದಿ ಸೆನೆಟರ್ ಬರ್ನಿ ಸ್ಯಾಂಡರ್ಸ್ ಅವರನ್ನು ಡೆಮಾಕ್ರಟಿಕ್ ಪಕ್ಷ ಕೈಬಿಟ್ಟ ನಂತರ ಅಧ್ಯಕ್ಷೀಯ ಸ್ಪರ್ಧೆಗೆ ಅವರಿಗೆ ಅವಕಾಶ ಸಿಕ್ಕಿತು. 90ರ ದಶಕದಲ್ಲಿ ಸೆನೆಟ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸೆನೆಟರ್ ಆಗಿದ್ದ ಬೈಡನ್ ಅವರು ಅನುಚಿತವಾಗಿ ವರ್ತಿಸಿದ್ದರು ಎಂದು ಮಾಜಿ ಉದ್ಯೋಗಿ ತಾರಾ ರೀಡ್ 2019ರಲ್ಲಿ ಆರೋಪಿಸಿದ್ದರು.1993ರಲ್ಲಿ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದರು ಎಂದು ಸಹ ಕಳೆದ ಮಾರ್ಚ್ ನಲ್ಲಿ ರೀಡ್ ಆರೋಪಿಸಿದ್ದರು. 

ಆದರೆ ಬೈಡನ್ ಮತ್ತು ಅವರ ಪ್ರಚಾರ ತಂಡ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಸಮಾನ ಲಿಂಗ ವಿವಾಹ(ಎಲ್ ಜಿಬಿಟಿ)ಹಕ್ಕುಗಳ ಪರವಾಗಿ ಬೈಡನ್ ಮಾತನಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT