ವಿದೇಶ

ಅಮೆರಿಕಾದಲ್ಲಿ ಒಂದೇ ದಿನ 1.70 ಲಕ್ಷ ಕೊರೋನಾ ಕೇಸ್: ವಿಶ್ವದಲ್ಲೇ ಅತಿ ಹೆಚ್ಚು

Manjula VN

ವಾಷಿಂಗ್ಟನ್: ಅಮೆರಿಕಾದಲ್ಲಿ ಮೊದಲ ಬಾರಿಗೆ 1.70 ಲಕ್ಷಕ್ಕೂ ಹೆಚ್ಚು ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. 

ಇದೂವರೆಗೆ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಷ್ಟೊಂದು ಅಧಿಕ ಪ್ರಮಾಣದ ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಎಲ್ಲಿಯೂ ದಾಖಲಾಗಿರಲಿಲ್ಲ. ನ.4ರಂದು ಅಮೆರಿಕಾದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿದಾಟಿತ್ತು. ಆ ಬಳಿಕ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. 

ಸಾರ್ವಜನಿಕ ಆರೋಗ್ಯ ಇಲಾಕೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಶನಿವಾರದಂದು ಅಮೆರಿಕಾದಲ್ಲಿ 170,000 ಹೊಸ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಅಮೆರಿಕಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,728,497ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ. 

ಅಮೆರಿಕಾದ ಪ್ರತೀ ನಗರಗಳಲ್ಲಿಯೂ ಹೆಚ್ಚೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇಲಿನಾಯ್ಸ್, ಅಯೋವಾ, ಕಾನ್ಸಾಸ್ ಮತ್ತು ಓಹಿಯೋ ಸೇರಿದಂತೆ ಕನಿಷ್ಠ 10 ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಅಲ್ಲಿನ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಅಪಾಯಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. 

ದಿನದಿಂದ ದಿನಕ್ಕೆ ಸೋಂಕು ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಹೊಸ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದೇ ಮೊದಲ ಬಾರಿಗೆ ಪಶ್ಚಿಮ ವರ್ಜೀನಿಯಾದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ನ್ಯೂಯಾರ್ಕ್ ನಗರದಲ್ಲಿ ಶಾಲೆಗಳ ಬಾಗಿಲು ಮುಚ್ಚುವಂದೆ ಆದೇಶಿಸಲಾಗಿದೆ. 

SCROLL FOR NEXT