ವಿದೇಶ

ಚೀನಾ ಅಟ್ಟಹಾಸಕ್ಕೆ ಅಂಕುಶ: ಒಗ್ಗೂಡಿ ಬಲಿಷ್ಠ ರಾಷ್ಟ್ರಗಳ ರಣತಂತ್ರ

Vishwanath S

ನವದೆಹಲಿ: ಇಂಡೋ-ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ ಚೀನಾದ ಆರ್ಭಟಕ್ಕೆ ಅಂಕುಶ ಹಾಕಿ ಅಲ್ಲಿ ಮುಕ್ತ ವಾತಾವರಣ ನಿರ್ಮಿಸುವ ಸಲುವಾಗಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಒಂದಾಗಿ ಕಾರ್ಯಯೋಜನೆ ರೂಪಿಸುತ್ತಿವೆ. ಇಲ್ಲಿ ಮುಕ್ತವಾಗಿರುವ ಹಾಗೂ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಈ ನಾಲ್ಕು ದೇಶಗಳು ಪರಸ್ಪರ  ಸಮ್ಮತಿಸಿವೆ. 

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರೈಸ್ ಪಾಯ್ನೆ ಹಾಗೂ ಜಪಾನ್ ನೂತನ ಪ್ರಧಾನಿ ಯೋಶಿಹಿಡೆ ಸುಗಾ ಅವರು ಇಂದು ಟೋಕಿಯೋದಲ್ಲಿ ಭೇಟಿಯಾಗಿ ಈ ವಿಚಾರದ ಬಗ್ಗೆ ಮಹತ್ವದ ಚರ್ಚೆ ಮಾಡಿದರು ಎಂದು ಜಪಾನ್ ತಿಳಿಸಿದೆ.

ಕಾನೂನಿಗೆ ಬದ್ಧವಾಗಿರುವ, ಪಾರದರ್ಶಕವಾಗಿರುವ, ಅಂತಾರಾಷ್ಟ್ರೀಯ ಸಾಗರದಲ್ಲಿ ಮುಕ್ತವಾಗಿ ಸಂಚರಿಸುವ, ಶಾಂತಿಯುತವಾಗಿ ವಿವಾದ ಬಗೆಹರಿಸುವಂತಹ ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ ರೂಪಿಸುವುದಕ್ಕೆ ಭಾರತ ಸದಾ ಬದ್ಧವಾಗಿರಲಿದೆ ಎಂದು ವಿದೇಶಾಂಗ  ಸಚಿವ ಎಸ್. ಜೈಶಂಕರ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕರೋನ ನಿಗ್ರಹಿಸಲು ಭಾರತ ಮತ್ತು ಅಮೆರಿಕ ಜಂಟಿಯಾಗಿ ಪ್ರಯತ್ನ ಮುಂದುವರೆಸಬೇಕು ಒಟ್ಟಿಗೆ ಕೆಲಸ ಮಾಡಬೇಕಾದ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ಜೈಶಂಕರ್ ಕರೋನ ನಿಗ್ರಹ ಪರಿಸ್ಥತಿ ಕುರಿತು ಚರ್ಚೆ ಮಾಡಿದ್ದಾರೆ.

SCROLL FOR NEXT