ವಿದೇಶ

ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಲೇ ಮಾಸ್ಕ್‌ ತೆಗೆದ ಟ್ರಂಪ್, ಶ್ವೇತ ಭವನಕ್ಕೆ ವಾಪಸ್

Srinivasamurthy VN

ವಾಷಿಂಗ್ಟನ್‌: ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಕಳೆದ ನಾಲ್ಕು ದಿನಗಳಿಂದ ಅಮೆರಿಕದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದ ಟ್ರಂಪ್ ಶ್ವೇತ ಭವನ ಪ್ರವೇಶಿಸುತ್ತಲೇ ತಾವು ಧರಿಸಿದ್ದ ಮಾಸ್ಕ್ ಅನ್ನು ತೆಗೆದಿದ್ದಾರೆ. ಅಲ್ಲದೆ ಅಲ್ಲಿಯೇ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ತಾವು ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಹೇಳಿದ್ದಾರೆ. ಅಲ್ಲದೇ ಕೊರನಾ ವೈರಸ್ ನಿಮ್ಮನ್ನು ಸೋಲಿಸಲು  ಬಿಡಬೇಡಿ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಶ್ವೇತಭವನಕ್ಕೆ ಮರಳುವಾಗ ದೈಹಿಕವಾಗಿ ಸದೃಢರಾಗಿರುವಂತೆ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ ಟ್ರಂಪ್‌ ಈ ಮಧ್ಯೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಅವುಗಳಲ್ಲಿ ರಾಜಕೀಯವೇ ಪ್ರಧಾನವಾಗಿತ್ತು. ಶೀಘ್ರವೇ ಪ್ರಚಾರಕ್ಕೆ ಮರಳುವುದಾಗಿ ಒಂದು ಟ್ವೀಟ್‌ನಲ್ಲಿ ಹೇಳಿದ ಅವರು, ಕೋವಿಡ್‌ಗೆ ಯಾರೂ  ಭಯಪಡಬೇಡಿ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ. 

ಇನ್ನು ಅಮೆರಿಕದಲ್ಲಿ ಈ ವರೆಗೂ 2,10,000 ಮಂದಿ ಕೊರೊನಾ ವೈರಸ್‌ಗೆ ಪ್ರಾಣ ತೆತ್ತಿದ್ದಾರೆ.

SCROLL FOR NEXT