ವಿದೇಶ

ಕೋವಿಡ್-19: ಆಸ್ಟ್ರಾ ಜೆನೆಕಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕಾ ಅಧ್ಯಯನ ಪುನಾರಂಭ

Srinivasamurthy VN

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದಲ್ಲಿ ಸ್ಥಗಿತವಾಗಿದ್ದ ಆಸ್ಟ್ರಾ ಜೆನೆಕಾ, ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗಳ ಕೋವಿಡ್ ಲಸಿಕಾ ಪ್ರಯೋಗ ಮತ್ತು ಅಧ್ಯಯನ ಪ್ರಕ್ರಿಯೆ ಪುನಾರಂಭಗೊಳ್ಳಲಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಅಮೆರಿಕ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಬ್ರಿಟಿಷ್‌ ಫಾರ್ಮಾ ಕಂಪನಿಯ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯ ಪ್ರಯೋಗವನ್ನು ಅಮೆರಿಕದಲ್ಲಿ ಪುನರಾರಂಭಿಸಲಾಗಿದ್ದು, ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಕೂಡ ಸೋಮವಾರದಿಂದ ತನ್ನ ಲಸಿಕೆ ಪ್ರಯೋಗ ಪುನರಾರಂಭಿಸಲು ಸಿದ್ಧತೆ ನಡೆಸಿದೆ ಎಂದು  ಹೇಳಿದೆ.

ಲಸಿಕೆ ಪ್ರಯೋಗ ಪುನಾರಂಭದ ಕುರಿತು ಎರಡೂ ಸಂಸ್ಥೆಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೂರನೇ ಹಂತದ ಪ್ರಯೋಗ ಯಶಸ್ವಿಯಾಗುವ ಭರವಸೆ ವ್ಯಕ್ತಪಡಿಸಿವೆ. ಲಸಿಕೆಯ ಪ್ರಯೋಗ ಪೂರ್ಣಗೊಂಡು ಅನುಮೋದನೆ ದೊರೆತಲ್ಲಿ ವಿತರಣೆಗೆ ಸಂಬಂಧಿಸಿ ಎರಡೂ ಕಂಪನಿಗಳು ಅಮೆರಿಕ ಮತ್ತು ಇತರ  ಕೆಲವು ದೇಶಗಳಿಂದ ಒಪ್ಪಂದ ಮಾಡಿಕೊಂಡಿವೆ.

‘ನೈತಿಕ ಮಾನದಂಡಗಳನ್ನು ಅನುಸರಿಸಿಕೊಂಡೇ ನಾವು ಪ್ರಕ್ರಿಯೆಗಳನ್ನು ಅನುಸರಿಸುತ್ತಿದ್ದೇವೆ. ಲಸಿಕೆಗೆ ಅನುಮೋದನೆ ನೀಡುವ ವಿಚಾರದಲ್ಲಿ ಎಫ್‌ಡಿಎ ಕಾರ್ಯವಿಧಾನಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬುದಾಗಿ ಪ್ರಯೋಗ ಪುನರಾರಂಭಗೊಂಡಿರುವ ಈ ಸಂದರ್ಭದಲ್ಲಿ ಖಚಿತಪಡಿಸುತ್ತಿದ್ದೇನೆ’ ಎಂದು ಲಸಿಕೆ  ಅಭಿವೃದ್ಧಿ ಕಾರ್ಯಾಚರಣೆ ಮುಖ್ಯಸ್ಥ ಮ್ಯಾಥ್ಯೂ ಹೆಪ್‌ಬರ್ನ್ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಬೆನ್ನು ಹುರಿಯಲ್ಲಿ ಉರಿಯೂತ ಕಾಣಿಸಿಕೊಂಡಿತ್ತು. ಪರಿಣಾಮವಾಗಿ ಸೆಪ್ಟೆಂಬರ್ 6ರಂದು ಅಮೆರಿಕದಲ್ಲಿಯೂ ಪ್ರಯೋಗ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಲಸಿಕೆ ಪ್ರಯೋಗ ಕಾರ್ಯ ಪುನಾರಂಭಗೊಂಡಿದೆ. ಅಮೆರಿಕದಲ್ಲಿ  ಅಧ್ಯಕ್ಷೀಯ ಚುನಾವಣೆಗೆ 10 ದಿನಗಳು ಬಾಕಿ ಇರುವಾಗಲೇ ಲಸಿಕೆ ಪ್ರಯೋಗ ಪುನರಾರಂಭಿಸಲಾಗಿದೆ. ಈ ಮಧ್ಯೆ, ಲಸಿಕೆಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ರಾಜಕೀಯ ಒತ್ತಡ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು  ವೇಳೆ ಲಸಿಕೆ ದೊರೆಯಲು ಆರಂಭವಾದರೆ ಅದನ್ನು ಹಾಕಿಸಿಕೊಳ್ಳಲು ಅಮೆರಿಕದ ಕಾಲುಭಾಗದಷ್ಟು ಮಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

SCROLL FOR NEXT