ವಿದೇಶ

ಅಧ್ಯಕ್ಷೀಯ ಚುನಾವಣೆ: ಸುಮಾರು 58.7 ಮಿಲಿಯನ್ ಅಮೆರಿಕನ್ ಜನತೆ ಈಗಾಗಲೇ ಮತ ಚಲಾಯಿಸಿದ್ದಾರೆ- ವರದಿ

Nagaraja AB

ವಾಷಿಂಗ್ಟನ್:  2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗವರೆಗೂ ಸುಮಾರು 58.7 ಮಿಲಿಯನ್ ಗೂ ಹೆಚ್ಚು ಅಮೆರಿಕದ ಜನತೆ ಈಗಾಗಲೇ ಮತ ಚಲಾಯಿಸಿದ್ದು, 2016 ರ ಮತದಾನದಲ್ಲಿ ದಾಖಲಾದ ಎಲ್ಲಾ ಆರಂಭಿಕ ಬ್ಯಾಲೆಟ್ (ಮತಪತ್ರ) ಮೀರಿಸಿದೆ. ಆದರೆ,  ಅಭೂತಪೂರ್ವ ಸಂಖ್ಯೆಯ ಮೇಲ್-ಇನ್ ಮತಪತ್ರಗಳ ಮತಗಳ ಎಣಿಕೆ ನವೆಂಬರ್ 3 ರ ಆಚೆಗೆ ವಿಸ್ತರಿಸುವುದರಿಂದ ಫಲಿತಾಂಶವು ವಿಳಂಬವಾಗುವ ಸಾಧ್ಯತೆಗೆ ಕಾರಣವಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ವಾಷಿಂಗ್ಟನ್ ಡಿಸಿ ಮತ್ತು ಎಲ್ಲಾ 50 ರಾಜ್ಯಗಳಲ್ಲಿ ಅಮೆರಿಕ ಮೂಲದ ನೆಟ್ ವರ್ಕ್ ಎಡಿಸನ್ ರಿಸರ್ಚ್ ಮತ್ತು ಕ್ಯಾಟಲಿಸ್ಟ್ ನಡೆಸಿದ ಚುನಾವಣೆ ಸಮೀಕ್ಷೆ ಪ್ರಕಾರ, ನವೆಂಬರ್ ಮೂರಕ್ಕೆ ಇನ್ನೂ 9 ದಿನಗಳು ಬಾಕಿಯಿರುವಂತೆಯೇ ಈವರೆಗೂ ಸಮಾರು 58.7 ಮಿಲಿಯನ್ ಗೂ ಹೆಚ್ಚು ಅಮೆರಿಕದ ಜನತೆ ಮತ ಚಲಾಯಿಸಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ.

2016ರ ಚುನಾವಣೆಯಲ್ಲಿ ಸುಮಾರು 58.3 ಮಿಲಿಯನ್ ಚುನಾವಣಾ ಪೂರ್ವ ಮತಪತ್ರಗಳನ್ನು ಚಲಾಯಿಸಲಾಗಿದೆ. ಇನ್ನೂ ಚುನಾವಣೆಗೆ 9 ದಿನಗಳು ಬಾಕಿ ಇರುವಂತೆಯೇ 2016ರಲ್ಲಿ ದಾಖಲಾಗಿದ್ದ ಆರಂಭಿಕ ಬ್ಯಾಲೆಟ್ ಗಳನ್ನು ಮೀರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ನಡೆಯುತ್ತಿರುವ ಚುನಾವಣಾ ಪೂರ್ವ ಮತದಾನವು ದೇಶಾದ್ಯಂತ ಗಮನ ಸೆಳೆದಿದೆ. ಮತದಾರರು ಮೇಲ್ ಮೂಲಕ ಅಥವಾ ನವೆಂಬರ್ ಮೊದಲು ವೈಯಕ್ತಿಕವಾಗಿ ಮತ ಚಲಾಯಿಸುವ ಶಕ್ತಿ ಹೊಂದಿರುವುದರಿಂದ ರಾಜ್ಯಗಳಲ್ಲಿ ದಾಖಲೆ ಸಂಖ್ಯೆಯ ಮತದಾನದ ಬಗ್ಗೆ ವರದಿಯಾಗುತ್ತಿದೆ.

ಅಭೂತಪೂರ್ವ ಮೇಲ್-ಮತದಾನದ ಹೊರತಾಗಿಯೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡನ್ ನಡುವೆ ಯಾರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಪೂರ್ಣ ಫಲಿತಾಂಶಗಳು ಚುನಾವಣೆ ನಡೆದ ರಾತ್ರಿಯೇ ತಿಳಿಯಲು ಆಗದು ಎಂದು ಮತ್ತೊಂದು ಸಿಎನ್ ಎನ್ ವರದಿ ಹೇಳಿದೆ.

ಕೋವಿಡ್- 19 ಸಾಂಕ್ರಾಮಿಕ ರೋಗವು ಲಕ್ಷಾಂತರ ಅಮೆರಿಕನ್ನರು ಅಧ್ಯಕ್ಷರಿಗೆ ಮತ ಚಲಾಯಿಸುವ ವಿಧಾನವನ್ನು ಬದಲಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

SCROLL FOR NEXT