ವಿದೇಶ

2021ರ ಮಧ್ಯದವರೆಗೆ ಕೋವಿಡ್‌-19 ಸಾರ್ವತ್ರಿಕ ಲಸಿಕೆ ಲಭ್ಯವಾಗದು; ವಿಶ್ವ ಆರೋಗ್ಯ ಸಂಸ್ಥೆ

Srinivasamurthy VN

ಜಿನೆವಾ: ಜಾಗತಿಕ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ 2021ರ ಮಧ್ಯಭಾಗದವರೆಗೂ ಲಸಿಕೆ ಲಭ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ವಿಜ್ಞಾನಿ ಮತ್ತು ವಕ್ತಾರರಾದ ಮಾರ್ಗರೆಟ್‌ ಹ್ಯಾರಿಸ್‌ ಅವರು, 'ಕೋವಿಡ್‌-19ಗೆ 2021ರ ಮಧ್ಯದ ಸಮಯದವರೆಗೆ ಸಾರ್ವತ್ರಿಕೆ ಲಸಿಕೆ ಕಂಡುಹಿಡಿಯಲು ಸಾಧ್ಯವಿಲ್ಲ. ವಾಸ್ತವದ ಸಮಯವನ್ನು ಪರಿಗಣನೆಗೆ ತೆಗೆದುಕೊಂಡರೆ ಮುಂದಿನ  ವರ್ಷದ ಅರ್ಧದವರೆಗೆ ಸಾರ್ವತ್ರಿಕ ಲಸಿಕೆ ಲಭ್ಯವಾಗುವುದಿಲ್ಲ. ಅಂತೆಯೇ ಈಗಾಗಲೇ ಹಲವು ಸಂಸ್ಥೆಗಳು ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಿದ್ದು, ಕನಿಷ್ಠ 6 ಮಂದಿ ಅದರಿಂದ ಸಕಾರಾತ್ಮಕ ಪರಿಣಾಮ ಪಡೆದಿದ್ದಾರೆ ಎಂದಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ವಿಜ್ಞಾನಿ ಭಾರತ ಮೂಲದ ವೈದ್ಯ ಡಾ.ಸೌಮ್ಯ ಸ್ವಾಮಿನಾಥನ್ ಅವರು, ಲಸಿಕೆ ತಯಾರಿಕಾ ಪ್ರಯೋಗ ಇದೀಗ ನಿರ್ಣಾಯಕ ಹಂತ ತಲುಪಿದೆ. ಬಹುತೇಕ ಲಸಿಕೆಗಳು ಮೂರನೇ ಹಂತದಲ್ಲಿದ್ದು, ಆದರೂ ನಿಜಾಂಶವೇನು ಎಂದರೆ 2021ರ  ಮಧ್ಯಭಾಗದವರೆಗೂ ಲಸಿಕೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ದೊರೆಯುವುದಿಲ್ಲ. 2021ರ 2 ಅಥವಾ ಮೂರನೇ ಮಧ್ಯಂತರದಲ್ಲಿ ಲಸಿಕೆ ಸಾರ್ವಜನಿಕ ಬಳಕೆಗೆ ದೊರೆಯಬಹುದು. ಈಗಾಗಲೇ ಹಲವು ರಾಷ್ಟ್ರಗಳು ತಮ್ಮದೇ ಆದ ಲಸಿಕೆಗಳ ಮೂಲಕ ತಮ್ಮ ದೇಶದ ಜನರ ರೋಗನಿರೋಧಕ ಶಕ್ತಿಯನ್ನು  ಹೆಚ್ಚಿಸುವ ಕಾಯಕಕ್ಕೆ ಮುಂದಾಗಿದೆ. ಜಾಗತಿಕವಾಗಿ ಬಿಲಿಯನ್ ಡೋಸ್ ಗಟ್ಟಲೆ ಲಸಿಕೆ ಅನಿವಾರ್ಯವಿದ್ದು. ಇದರ ತಯಾರಿಕೆಗೆ ಸಾಕಷ್ಟು ಕಾಲಾವಕಾಶಬೇಕು. ಹೀಗಾಗಿ ಜನರು ತಮ್ಮ ಜಾಗ್ರತೆಯಲ್ಲಿ ತಾವಿದ್ದು, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಸೋಂಕಿನಿಂದ ದೂರವಿರಬೇಕು ಎಂದು ಅವರು  ಸಲಹೆ ನೀಡಿದ್ದಾರೆ.

SCROLL FOR NEXT