ವಿದೇಶ

ಲಡಾಖ್ ಬಿಕ್ಕಟ್ಟು: ನಿರಂತರ ಮಾತುಕತೆಗೆ ಭಾರತ-ಚೀನಾ ನಿರ್ಧಾರ - ಬೀಜಿಂಗ್

Vishwanath S

ಬೀಜಿಂಗ್: ಸೆಪ್ಟೆಂಬರ್ 21ರಿಂದ ಭಾರತದೊಂದಿಗೆ ಆರನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ಗಡಿ ವಿಷಯದ ಕುರಿತು ಮಾತುಕತೆ ಮತ್ತು ಚರ್ಚೆಯನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಕ್ತಾರ ವಾಂಗ್ ವೆನ್ಬಿನ್ ಹೇಳಿಕೆಯನ್ನು ಉಲ್ಲೇಖಿಸಿ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದ್ದು  "ಚೀನಾ ಮತ್ತು ಭಾರತ ನಿನ್ನೆ 6ನೇ ಸುತ್ತಿನ ಕೋರ್ ಕಮಾಂಡರ್-ಮಟ್ಟದ ಮಾತುಕತೆಗಳನ್ನು ನಡೆಸಿತ್ತು. ಈ ವೇಳೆ ಪ್ರಸ್ತುತ ಗಡಿ ಪರಿಸ್ಥಿತಿಯ ಬಗ್ಗೆ ಉಭಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಚರ್ಚಿಸಲು ಮುಂದುವರಿಯಲು ಒಪ್ಪಿಕೊಂಡಿವೆ ಎಂದು ವರದಿ ಮಾಡಿದೆ. 

ಸೆ.21ರಂ ಬೆಳಗ್ಗೆ 10 ಗಂಟೆಗೆ ಆರಂಭವಾದ ಸಭೆ ರಾತ್ರಿ 11 ಗಂಟೆಗೆ ಮುಕ್ತಾಯವಾಗಿದ್ದು ಸತತ 13 ಗಂಟೆಗಳ ಕಾಲ ನಡೆದ ಈ ಮಿಲಿಟರಿ ಮಾತುಕತೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಇನ್ನು ಭಾರತೀಯ ಸೇನೆಯ ಪರವಾಗಿ 14 ಕೋರ್ ಸೇನಾ ತುಕಡಿಯ ಮುಖ್ಯಸ್ಥ ಲೆ.ಜ ಹರಿಂದರ್ ಸಿಂಗ್ ಹಾಗೂ ಲೆ.ಜ ಪಿಜಿಕೆ ಮೆನನ್ ಸಭೆಯ ನೇತೃತ್ವ ವಹಿಸಿದ್ದಾರೆ. 

ಲಡಾಖ್ ನ ದಕ್ಷಿಣ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿ ನಡೆದ ಘರ್ಷಣೆ ಬಳಿಕ ನಡೆದ ಸಭೆ ಇದಾಗಿದೆ. ಇತ್ತೀಚೆಗೆ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯು ಆರು ಸೂಕ್ಷ್ಮ ಪ್ರದೇಶಗಳ ಮೇಲೆ ಸೇನೆ ತನ್ನ ಹಿಡಿತವನ್ನು ಸಾಧಿಸಿತ್ತು. ಚರ್ಚೆ ವೇಳೆ ಭಾರತದ ಪಟ್ಟು ಬಿಗಿಯಾಗಲು ನೆರವಾಗಿದೆ ಎನ್ನಲಾಗಿದೆ.

SCROLL FOR NEXT