ವಿದೇಶ

ಕೋವಿಡ್‌-19 ಎಫೆಕ್ಟ್: 2020-21ರಲ್ಲಿ ಭಾರತದ ಆರ್ಥಿಕತೆ ಶೇ.5.9ರಷ್ಟು ಕ್ಷೀಣ- ವಿಶ್ವಸಂಸ್ಥೆ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ 2020ರಲ್ಲಿ ಭಾರತದ ಆರ್ಥಿಕತೆ ಶೇ.5.9ಕ್ಕೆ ಕುಸಿಯಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಉಂಟಾದ ವ್ಯತಿರಿಕ್ತ ಪರಿಣಾಮವಾಗಿ ಭಾರತದ ಆರ್ಥಿಕತೆಯು 2020ರಲ್ಲಿ ಶೇ.5.9ರಷ್ಟು ಸಂಕುಚಿತಗೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಘಟಕ (ಅಂಕ್ಟಾಡ್)ದ ವರದಿಯು ಅಂದಾಜಿಸಿದೆ. ಆರ್ಥಿಕ ಬೆಳವಣಿಗೆಯು 2011ರಲ್ಲಿ ಚೇತರಿಸಿಕೊಳ್ಳಲಿದೆಯಾದರೂ ಈ ವರ್ಷದ ಕುಸಿತವು ಶಾಶ್ವತ ಆದಾಯ ನಷ್ಟವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಕೆ ನೀಡಿದೆ.

ಜಗತ್ತಿನ 213ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಹಾವಳಿಯಿಂದಾಗಿ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಇದರ ನಡುವೆಯೇ ವಿಶ್ವ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ತನ್ನ ವ್ಯಾಪಾರ ಮತ್ತು ಅಭಿವೃಧ್ಧಿ ವರದಿ-2020 ಬಿಡುಗಡೆ ಮಾಡಿದ್ದು, ವರದಿಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಾರದ ಕೊರೋನ ವೈರಸ್ ಸಾಂಕ್ರಾಮಿಕದ ನಡುವೆ ವಿಶ್ವ ಆರ್ಥಿಕತೆಯು ತೀವ್ರ ಹಿಂಜರಿತಕ್ಕೊಳಗಾಗಿದೆ ಎಂದು ಹೇಳಿದೆ. 

ಈ ವರ್ಷ ಜಾಗತಿಕ ಆರ್ಥಿಕತೆಯು ಶೇ.4.3ರಷ್ಟು ಕ್ಷೀಣಿಸಲಿದ್ದು, ಇದರೊಂದಿಗೆ ವರ್ಷಾಂತ್ಯದ ವೇಳೆಗೆ ಜಾಗತಿಕ ಉತ್ಪನ್ನದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆ ಆರಂಭಗೊಳ್ಳುವ ಮುನ್ನ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಕ್ಕಿಂತ ಆರು ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗಳ ಕೊರತೆಯಾಗಲಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಕೋವಿಡ್ ಸೋಂಕು ದಾಳಿಗೆ ತತ್ತರಿಸಿ ಹೋಗಿರುವ ಬ್ರೆಜಿಲ್, ಭಾರತ ಮತ್ತು ಮೆಕ್ಸಿಕೋದ ಆರ್ಥಿಕತೆಗಳು ತೀವ್ರ ಹದಗೆಟ್ಟಿದೆ.  ದೇಶೀಯ ಆರ್ಥಿಕ ಚಟುವಟಿಕೆಗಳು ಕುಗ್ಗಿದಾಗ ಅಂತಾರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳೂ ಕುಗ್ಗುತ್ತವೆ. ಈ ವರ್ಷ ವ್ಯಾಪಾರವು ಶೇ.20ರಷ್ಟು ಮತ್ತು ವಿದೇಶಿ ನೇರ ಹೂಡಿಕೆಗಳು ಶೇ.40ರವರೆಗೆ ಕುಸಿಯಲಿವೆ ಮತ್ತು ಹಣಕಾಸು ರವಾನೆಗಳು 100 ಶತಕೋಟಿ ಡಾ.ಗೂ ಹೆಚ್ಚಿನ ಇಳಿಕೆಯನ್ನು ಕಾಣಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಮುಖವಾಗಿ ಭಾರತದಲ್ಲಿ ಕೊರೋನ ವೈರಸ್ ಪ್ರಸರಣವನ್ನು ತಡೆಯಲು ಹೇರಲಾಗಿದ್ದ ಕಠಿಣ ಲಾಕ್ಡೌನ್ ಕ್ರಮಗಳು ದೇಶಾದ್ಯಂತ ಹಲವಾರು ಉತ್ಪಾದಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರಿಂದ 2020ರಲ್ಲಿ ತೀವ್ರ ಆರ್ಥಿಕ ಹಿಂಜರಿತವುಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಪ್ರಗತಿ ದರಗಳಿಗೆ ಅನುಗುಣವಾಗಿ 2021ರಲ್ಲಿ ದೇಶದ ಆರ್ಥಿಕತೆಯು ಪುಟಿದೇಳಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

SCROLL FOR NEXT