ವಿದೇಶ

ಕೋವಿಡ್-19: ಬ್ರಿಟನ್ ನಲ್ಲಿ ಲಸಿಕೆಯ ಪರಿಣಾಮಕತ್ವ ಅರಿಯಲು ವಾಲಂಟೀರ್ ಗಳ ಮೇಲೆ 'ವೈರಸ್' ಪ್ರಯೋಗಕ್ಕೆ ಸಿದ್ಧತೆ!

Srinivasamurthy VN

ಲಂಡನ್: ಜಾಗತಿಕ ಕೊರೋನಾ ವೈರಸ್ ಲಸಿಕಾ ಪ್ರಯೋಗ ನಿರ್ಣಾಯಕ ಹಂತ ತಲುಪಿದ್ದು, ಅತ್ತ ಬ್ರಿಟನ್ ನಲ್ಲಿ ಆರೋಗ್ಯವಂತ ಸ್ವಯಂ ಸೇವಕರ ಮೇಲೆ ವೈರಸ್ ಕುರಿತ ಮಹತ್ವದ ಪ್ರಯೋಗ ಮಾಡಲಾಗುತ್ತಿದೆ.

ಹೌದು.. ಈ ಬಗ್ಗೆ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದ್ದು, ಬ್ರಿಟನ್ ನಲ್ಲಿ ತಯಾರಾಗುತ್ತಿರುವ ಕೋವಿಡ್ ಲಸಿಕೆಯ ಪರಿಣಾಮವನ್ನು ತಿಳಿಯಲು ಲಸಿಕೆ ಪಡೆದ ಸ್ವಯಂಸೇವಕರನ್ನು ವೈರಸ್ ಸೋಂಕಿಗೆ ಒಳಗಾಗುವಂತೆ ಮಾಡಲು ಸಿದ್ಧತೆ ನಡೆಸಲಾಗಿದೆ. ವ್ಯಾಕ್ಸಿನ್ ಪಡೆದ ಆರೋಗ್ಯವಂತ ಸ್ವಯಂ ಸೇವಕರನ್ನು ವೈರಸ್ ಗೆ ತೆರೆದುಕೊಳ್ಳುವಂತೆ ಮಾಡಿ ಆ ಮೂಲಕ ಲಸಿಕೆಯ ಪರಿಣಾಮವನ್ನು ಸಂಶೋಧನೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಸಂಬಂಧ ಅಮೆರಿಕ ಮೂಲದ ಸಂಸ್ಥೆ ಸುಮಾರು 2 ಸಾವಿರ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಬ್ರಿಟನ್ ಸರ್ಕಾರದ ನಿಧಿಯಡಿಯಲ್ಲಿ ಈ ಪ್ರಯೋಗವನ್ನು ನಡೆಸಲಾಗುತ್ತಿದ್ದು, ಇದಕ್ಕಾಗಿ ಕೆಲ ವೈದ್ಯಕೀಯ ಕಾಲೇಜುಗಳು ಕೂಡ ಕೈ ಜೋಡಿಸಿವೆ ಎನ್ನಲಾಗಿದೆ. ಮುಂಬರುವ ಜನವರಿಯಲ್ಲಿ ಈ ಪ್ರಯೋಗ ನಡೆಯುವ ಸಾಧ್ಯತೆ ಇದೆ.

ಬ್ರಿಟನ್ ನಲ್ಲಿ ನಡೆಸುವ ಯಾವುದೇ ವೈದ್ಯಕೀಯ ಪ್ರಯೋಗಗಳನ್ನುಅಲ್ಲಿನ ಹೆಲ್ತ್‌ಕೇರ್ ರೆಗ್ಯುಲೇಟರ್‌ನ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಕ ಸಂಸ್ಥೆ (ಎಂಹೆಚ್‌ಆರ್‌ಎ) ಅನುಮೋದಿಸುತ್ತದೆ. ಪ್ರಸ್ತುತ ಕೋವಿಡ್ ಲಸಿಕಾ ಪ್ರಯೋಗದ ಕುರಿತೂ ಕೂಡ ಈ ಸಂಸ್ಥೆ ಗಮನ ಹರಿಸಿದ್ದು, ಲಸಿಕೆ ಪ್ರಯೋಗದ ಸುರಕ್ಷತೆ ಕುರಿತು ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ಲಸಿಕೆ ಪ್ರಯೋಗಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ.

ಈ ಹಿಂದೆ ಇದೇ ಬ್ರಿಟನ್ ನಲ್ಲಿ ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರೊಬ್ಬರಲ್ಲಿ ವಿಚಿತ್ರ ಸಮಸ್ಯೆ ಉಂಟಾಗಿತ್ತು. ಈ ಘಟನೆ ಬಳಿಕ ಭಾರತದಲ್ಲಿ ಲಸಿಕೆ ಪ್ರಯೋಗಾ ತಾಂತ್ಕಾಲಿಕ ಸ್ಥಗಿತವಾಗಿತ್ತು. ಇದೇ ಕಾರಣಕ್ಕೆ ಹಾಲಿ ಪ್ರಯೋಗದ ಕುರಿತು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ ಎನ್ನಲಾಗಿದೆ.

ಲಸಿಕೆ ಸಹಭಾಗಿತ್ವದಲ್ಲಿ ಕೈಜೋಡಿಸದ ಅಮೆರಿಕ, ಚೀನಾ
ಭವಿಷ್ಯದಲ್ಲಿ ಕೋವಿಡ್–19 ಲಸಿಕೆಯ ನ್ಯಾಯಸಮ್ಮತ ವಿತರಣೆಗಾಗಿ ಹಮ್ಮಿಕೊಳ್ಳಲಾಗಿರುವ ಯೋಜನೆಗೆ ಅಮೆರಿಕ ಹಾಗೂ ಚೀನಾ ಕೈಜೋಡಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ. ಈವರೆಗೆ 156 ದೇಶಗಳು ಯೋಜನೆಗೆ ಸೇರ್ಪಡೆಯಾಗಿವೆ. ಅಮೆರಿಕದಲ್ಲಿ ಈವರೆಗೆ 68.9 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಮೃತಪಟ್ಟವರ ಸಂಖ್ಯೆ 2 ಲಕ್ಷ ದಾಟಿದೆ. ಭಾರತದಲ್ಲಿ ಕಳೆದ ನಾಲ್ಕು ದಿನಗಳಿಂದ ಸೋಂಕಿಗೆ ತುತ್ತಾಗುತ್ತಿರುವವರಿಗಿಂತಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

SCROLL FOR NEXT