ವಿದೇಶ

ಕೋವಿಡ್ ಉಲ್ಬಣ: ಭಾರತ, ಪಾಕಿಸ್ತಾನದ ವಿಮಾನ ಸೇವೆ ರದ್ದುಗೊಳಿಸಿದ ಕೆನಡಾ

Srinivasamurthy VN

ಒಟ್ಟಾವಾ: ಭಾರತ ಮತ್ತು ಪಾಕಿಸ್ತಾನದ ಎಲ್ಲ ಪ್ರಯಾಣಿಕ ವಿಮಾನಗಳನ್ನು ಕೆನಡಾ ಸರ್ಕಾರ ಗುರುವಾರ 30 ದಿನಗಳ ಕಾಲ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. 

ಭಾರತ ಮತ್ತು ಪಾಕಿಸ್ತಾನದಿಂದ ಬರುವ ಪ್ರಯಾಣಿಕರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಪತ್ತೆಯಾಗಿತ್ತಿದ್ದು, ಇದೇ ಕಾರಣಕ್ಕೆ ಪ್ರಯಾಣಿಕ ವಿಮಾನಗಳನ್ನು ರದ್ದು ಮಾಡಿರುವುದಾಗಿ ಕೆನಡಾ ಸಾರಿಗೆ ಸಚಿವ ಒಮರ್ ಅಲ್ಘಾಬ್ರಾ ಪ್ರಕಟಿಸಿದ್ದಾರೆ. 'ಭಾರತ ಮತ್ತು ಪಾಕಿಸ್ತಾನದಿಂದ ಕೆನಡಾಕ್ಕೆ ಆಗಮಿಸುವ   ಪ್ರಯಾಣಿಕರಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣಗಳು ಪತ್ತೆಯಾಗುತ್ತಿವೆ. ಕೆನಡಾಕ್ಕೆ ಭಾರತ ಮತ್ತು ಪಾಕಿಸ್ತಾನದಿಂದ ಆಗಮಿಸುವ ಎಲ್ಲಾ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನಗಳನ್ನು ಅಮಾನತುಗೊಳಿಸಲಾಗಿದೆ. ಇದೊಂದು ತಾತ್ಕಾಲಿಕ ಕ್ರಮವಾಗಿದ್ದು, ಮುಂದಿನ ಪರಿಸ್ಥಿತಿ ಅವಲೋಕನ  ಮಾಡಿ ನಿರ್ಬಂಧ ಮುಂದುವರಿಕೆ ಅಥವಾ ಸ್ಥಗಿತದ ಕುರಿತು ನಿರ್ಧರಿಸುತ್ತೇವೆ. ಗುರುವಾರ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬಂದಿದೆ ಎಂದು ಹೇಳಿದ್ದಾರೆ.

ಸರಕು ವಿಮಾನಗಳಿಗೆ ನಿರ್ಬಂಧವಿಲ್ಲ
ಇನ್ನು ಹಾಲಿ ನಿರ್ಬಂಧ ಪ್ರಯಾಣಿಕ ವಿಮಾನಗಳಿಗೆ ಮಾತ್ರ ಇರಲಿದ್ದು, ಸರಕು ವಿಮಾನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ವಿಶೇಷವಾಗಿ ಲಸಿಕೆಗಳು, ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಇತರ ಅಗತ್ಯ ವಸ್ತುಗಳ ಸಾಗಣೆ ಮಾಡುವ ವಿಮಾನಗಳಿಗೆ ನಿರ್ಬಂಧಗಳಿರುವುದಿಲ್ಲ ಎಂದೂ ಒಮರ್ ಅಲ್ಘಾಬ್ರಾ  ಸ್ಪಷ್ಟಪಡಿಸಿದ್ದಾರೆ.

ಇನ್ನು ಭಾರತದಲ್ಲಿ ಪತ್ತೆಯಾಗಿರುವ ಇಮ್ಮಡಿ ಮತ್ತು ತ್ರಿವಳಿ ರೂಪಾಂತರಿ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಕೆನಡಾದಲ್ಲೂ ಪತ್ತೆಯಾಗಿದ್ದು, ಕೆನಡಾದಲ್ಲಿ ನಡೆದ ಜೆನೋಮ್ ಪರೀಕ್ಷೆಯಲ್ಲಿ ಸುಮಾರು 24ಕ್ಕೂ ಅಧಿಕ ಮಂದಿ ಸೋಂಕಿತರಲ್ಲಿ ಭಾರತ ಇಮ್ಮಡಿ ಮತ್ತು ತ್ರಿವಳಿ ವೈರಸ್ ಸೋಂಕುಗಳು ಪತ್ತೆಯಾಗಿದೆ. 

SCROLL FOR NEXT