ವಿದೇಶ

ಕೊರೋನಾ ಉಲ್ಬಣ ಎದುರಿಸುತ್ತಿರುವ ಭಾರತಕ್ಕೆ ನೆರವು ನೀಡಲು ಬದ್ಧ: ಚೀನಾ

Lingaraj Badiger

ಬೀಜಿಂಗ್: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಮತ್ತು ಅಲ್ಲಿ ಜನರನ್ನು ಚೀನಾ ದೃಢವಾಗಿ ಬೆಂಬಲಿಸುತ್ತಿದೆ ಮತ್ತು ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ನೆರವು ನೀಡುವ ಕುರಿತು ನವದೆಹಲಿಯೊಂದಿಗೆ ಸಂವಹನ ನಡೆಸಲಾಗುತ್ತಿದೆ ಎಂದು ಚೀನಾ ಶುಕ್ರವಾರ ಹೇಳಿದೆ.

ಚೀನಾ ನಿನ್ನೆಯಷ್ಟೇ ಕೊರೋನಾ ವೈರಸ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಅಗತ್ಯ ನೆರವು ಹಾಗೂ ಬೆಂಬಲ ನೀಡುವುದಾಗಿ ತಿಳಿಸಿತ್ತು. 

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು, "ಭಾರತದಲ್ಲಿ ಇತ್ತೀಚೆಗೆ ಹದಗೆಡುತ್ತಿರುವ ಸಾಂಕ್ರಾಮಿಕ ಪರಿಸ್ಥಿತಿಗಾಗಿ ನಾವು ನಮ್ಮ ಪ್ರಾಮಾಣಿಕ ಸಹಾನುಭೂತಿಯನ್ನು ಕಳುಹಿಸುತ್ತೇವೆ" ಎಂದು ಹೇಳಿದರು.

ಚೀನಾದ ಸರ್ಕಾರ ಮತ್ತು ಜನರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಮತ್ತು ಅಲ್ಲಿನ ಜನರನ್ನು ದೃಢವಾಗಿ ಬೆಂಬಲಿಸುತ್ತದೆ” ಎಂದು ಚೀನಾದ ಅಧಿಕೃತ ಮಾಧ್ಯಮಗಳ ಪ್ರಶ್ನೆಗೆ ಲಿಜಿಯಾನ್ ಉತ್ತರಿಸಿದರು.

ಭಾರತದ ಅಗತ್ಯವನ್ನು ಆಧರಿಸಿ, ನಾವು ಬೆಂಬಲ ಮತ್ತು ಸಹಾಯವನ್ನು ನೀಡಲು ಸಿದ್ಧರಾಗಿದ್ದೇವೆ. ಈ ಸಂಬಂಧ ನಾವು ಭಾರತೀಯ ತಂಡದೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಾಗ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿ ಭಾರತ ನೆರವು ನೀಡಿತ್ತು. ಇದೀಗ ಭಾರತಕ್ಕೆ ನೆರವು ನೀಡಲು ಸಿದ್ಧ ಎಂದು ಚೀನಾ ಹೇಳಿದೆ.

SCROLL FOR NEXT