ವಿದೇಶ

ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ!

Nagaraja AB

ಬೀಜಿಂಗ್: ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣತೆ ತಡೆಗಟ್ಟುವ ಗುರಿಯೊಂದಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಪ್ರಸ್ತಾಪಿತ ಮೂರು ಮಕ್ಕಳ ನೀತಿಯನ್ನು ಚೀನಾದ ರಾಷ್ಟ್ರೀಯ ಶಾಸಕಾಂಗ ಶುಕ್ರವಾರ ಅಧಿಕೃತವಾಗಿ ಅನುಮೋದಿಸಿತು.

ಚೀನಾ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡುವ ಪರಿಷ್ಕೃತ ಜನಸಂಖ್ಯಾ ಮತ್ತು ಕುಟುಂಬ ಯೋಜನಾ ಕಾನೂನು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ನ ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆಯಿತು.

ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಹೆಚ್ಚಿನ ಮಕ್ಕಳನ್ನು ಹೊಂದಲು ಚೀನಾ ದಂಪತಿಗಳ ಹಿಂಜರಿಕೆಯನ್ನು ಹೋಗಲಾಡಿಸಲು ಹಾಗೂ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಕ್ರಮಗಳೊಂದಿಗೆ ಅವರ ಕಾಳಜಿಗಳನ್ನು ಪರಿಹರಿಸುವ ಉದ್ದೇಶದೊಂದಿಗೆ ತಿದ್ದುಪಡಿ ಕಾನೂನನ್ನು ಅಂಗೀಕರಿಸಲಾಗಿದೆ.

ಮಕ್ಕಳ ಬೆಳವಣಿಗೆ, ಅವರಿಗೆ ಶಿಕ್ಷಣ ವೆಚ್ಚ, ಹಣಕಾಸು, ತೆರಿಗೆಗಳು, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗ ಸೇರಿದಂತೆ ಕುಟುಂಬಗಳ ಹೊರೆ ಕಡಿಮೆ ಮಾಡಲು ಬೆಂಬಲದ ಕ್ರಮಗಳಿಗೆ ಹೊಸ ಕಾನೂನಿನಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ರಾಜ್ಯದಿಂದ ಕಾರ್ಯನಿರ್ವಹಿಸುವ ಚೀನಾ ಡೈಲಿ ವರದಿ ಮಾಡಿದೆ. 

ಈ ವರ್ಷದ ಮೇ ತಿಂಗಳಲ್ಲಿ ಆಡಳಿತಾರೂಢ ಚೀನಾದ ಕಮ್ಯೂನಿಸ್ಟ್ ಪಾರ್ಟಿ, ಎರಡು ಮಕ್ಕಳ ನೀತಿಯನ್ನು ಸಡಿಲಗೊಳಿಸಿ, ಎಲ್ಲಾ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. 2016ರಲ್ಲಿ ಎರಡು ಮಕ್ಕಳನ್ನು ಹೊಂದಲು ಚೀನಾ ಅವಕಾಶ ನೀಡಿತ್ತು.

ಮೂರು ದಶಕಗಳಿಂದ ಜಾರಿಯಲ್ಲಿದ್ದ ಒಂದು ಮಗುವಿನ ನೀತಿಯಿಂದ 400 ಮಿಲಿಯನ್‌ಗಿಂತಲೂ ಹೆಚ್ಚು ಜನನಗಳನ್ನು ತಡೆಯಲಾಗಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT