ವಿದೇಶ

ಜಪಾನ್: ಸೈಬರ್ ವಂಚಕರಿಂದ 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಕಳವು

Harshavardhan M

ಟೊಕಿಯೊ: ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರವೊಂದರಿಂದ ಹ್ಯಾಕರ್ ಗಳು 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ. ಲಿಕ್ವಿಡ್ ಎನ್ನುವ ಸಂಸ್ಥೆಯಲ್ಲಿ ಈ ಭಾರೀ ಮೊತ್ತದ ಕಳವು ನಡೆದಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಕಳವು ಪ್ರಕರಣ ಇದಾಗಿದೆ. 

ಕ್ರಿಪ್ಟೊ ಕರೆನ್ಸಿಯನ್ನು ಸಂಗ್ರಹಿಸಿ ಇಡಲಾಗಿದ್ದ ವ್ಯಾಲೆಟ್ ನಲ್ಲಿ ಅನಧಿಕೃತ ಬಳಕೆದಾರ ಅಕ್ರಮವಾಗಿ ಹ್ಯಾಕ್ ಮಾಡುವ ಮೂಲಕ ಪ್ರವೇಶ ಪಡೆದಿರುವುದು ತಜ್ನರ ಗಮನಕ್ಕೆ ಬಂದಿತ್ತು. ಈ ಸಂಬಂಧ ಪರಿಶೀಲನೆ ನಡೆಸಿದಾಗ ಒಟ್ಟು 721 ಕೋಟಿ ರೂ. ಮೌಲ್ಯದ ಸಂಪತ್ತು ಕಳವಾಗಿರುವುದು ಪತ್ತೆಯಾಗಿತ್ತು. 

ಕಳೆದ ವಾರ ಪಾಲಿ ನೆಟ್ ವರ್ಕ್ ಎಂಬ ಕ್ರಿಪ್ಟೊ ಕರೆನ್ಸಿ ಸಂಸ್ಥೆಯ ಕಂಪ್ಯೂಟರ್ ಗಳ ಮೇಲೆ ದಾಳಿ ನಡೆಸಿದ್ದ ಹ್ಯಾಕರ್ ಗಳು 4,400 ಕೋಟಿ ಮೌಲ್ಯದ ಸಂಪತ್ತನ್ನು ಕಳವು ಮಾಡಿದ್ದರು. ಆದರೆ ಕೆಲ ಸಮಯ ನಂತರ ಕಳವು ಮಾಡಿದ ಹ್ಯಾಕರ್ ಗಳೇ ಆ ಮೊತ್ತವನ್ನು ಹಿಂತಿರುಗಿಸಿ, ತಮ್ಮ ಉದ್ದೇಶ ಕಲವು ಮಾಡುವುದಲ್ಲ ಜಾಗೃತಿ ಮೂಡಿಸುವುದು ಎಂಬ ಸಂದೇಶ ಕಳಿಸಿದ್ದರು.

ಆ ಹ್ಯಾಕರ್ ಗಳು ಪಾಲಿ ನೆಟ್ ವರ್ಕ್ ಕ್ರಿಪ್ಟೊ ಕರೆನ್ಸಿ ಕೇಂದ್ರದ ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನು ಪತ್ತೆ ಹಚ್ಚಿ ಸೈಬರ್ ದಾಳಿ ನಡೆಸಿದ್ದರು. ಈ ರೀತಿಯ ಲೋಪವನ್ನು ಮುಂದೆ ಆಗದಂತೆ ಎಚ್ಚರ ವಹಿಸಿ ಎಂದು ಹ್ಯಾಕರ್ ಗಳು ತಿಳಿಸಿದ್ದರು. ಆ ಘಟನೆ ಮಾಸುವ ಮೊದಲೇ ಜಪಾನ್ ನಲ್ಲಿ ಲಿಕ್ವಿಡ್ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದ ಮೇಲೆ ಸೈಬರ್ ದಾಳಿ ನಡೆದಿದೆ.

SCROLL FOR NEXT