ವಿದೇಶ

ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಸಹ-ಶಿಕ್ಷಣ ನಿಷೇಧಿಸಿದ ತಾಲಿಬಾನ್: ವರದಿ

Lingaraj Badiger

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಿದ ಕೆಲವೇ ದಿನಗಳಲ್ಲಿ ಹೆರಾತ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಹ-ಶಿಕ್ಷಣವನ್ನು ನಿಷೇಧಿಸಿದ್ದಾರೆ ಮತ್ತು ಇದನ್ನು 'ಸಮಾಜದ ಎಲ್ಲ ಅನಿಷ್ಟಗಳ ಮೂಲ' ಎಂದು ವಿವರಿಸಲಾಗಿದೆ.

ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಶನಿವಾರ ವರದಿ ಮಾಡಿದೆ.

ಕಳೆದ ವಾರ ಅಫ್ಘಾನಿಸ್ತಾನವನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಹೊರಡಿಸಿದ ಮೊದಲ 'ಫತ್ವಾ' ಇದು. 

ಅಫ್ಘಾನಿಸ್ತಾನ ವಶಕ್ಕೆ ಪಡೆದ ನಂತರ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್, ತಾಲಿಬಾನ್ ಇಸ್ಲಾಮಿಕ್ ಕಾನೂನಿನ ನಿಯಮಗಳ ಅಡಿಯಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಪ್ರತಿನಿಧಿಗಳು ಭಾಗವಹಿಸಿದ್ದ ಮೂರು ಗಂಟೆಗಳ ಸಭೆಯಲ್ಲಿ ಸಹ-ಶಿಕ್ಷಣವನ್ನು ಕೊನೆಗೊಳಿಸಬೇಕು ಎಂದು ಅಫ್ಘಾನಿಸ್ತಾನ ಉನ್ನತ ಶಿಕ್ಷಣದ ಮುಖ್ಯಸ್ಥ ಮುಲ್ಲಾ ಫರೀದ್ ಅವರು ಹೇಳಿದ್ದಾರೆ.

ಸದ್ಗುಣಶೀಲ ಮಹಿಳಾ ಉಪನ್ಯಾಸಕರಿಗೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಕಲಿಸಲು ಅವಕಾಶವಿದೆ. ಆದರೆ ಅವರು ಪುರುಷರಿಗೆ ಉಪನ್ಯಾಸ ಮಾಡುವಂತಿಲ್ಲ. ಸಹ-ಶಿಕ್ಷಣ 'ಸಮಾಜದಲ್ಲಿನ ಎಲ್ಲಾ ಅನಿಷ್ಟಗಳ ಮೂಲ' ಎಂದು ಫರೀದ್ ಕರೆದಿದ್ದಾರೆ ಎಂದು ವರದಿ ತಿಳಿಸಿದೆ.

SCROLL FOR NEXT