ವಿದೇಶ

ಚುನಾವಣೆಯೇ ಬೇಕಿಲ್ಲ: ಚುನಾವಣಾ ಆಯೋಗವನ್ನು ವಿಸರ್ಜಿಸಿದ ತಾಲಿಬಾನ್ ಸರ್ಕಾರ!

Srinivasamurthy VN

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳು ಇದೀಗ ದೇಶದ ಚುನಾವಣಾ ಆಯೋಗವನ್ನೇ ವಿಸರ್ಜಿಸಿದೆ.

ಹೌದು.. ಅಫ್ಘಾನಿಸ್ತಾನ ಚುನಾವಣಾ ಆಯೋಗವನ್ನು ತಾಲಿಬಾನ್ ಸರ್ಕಾರ ವಿಸರ್ಜಿಸಿದ್ದು, ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ ದೂರು ಆಯೋಗವನ್ನು ವಿಸರ್ಜಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ಭಾನುವಾರ ಹೇಳಿದ್ದಾರೆ. 

ಪ್ರಸಕ್ತ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಈ ವ್ಯವಸ್ಥೆಗಳು ಅನಗತ್ಯ. ಭವಿಷ್ಯದಲ್ಲಿ ಅಗತ್ಯವಿದ್ದರೆ ನಾವು ಅವುಗಳನ್ನು ಪುನಃಸ್ಥಾಪಿಸಲಿದ್ದೇವೆ. ಅದೇ ರೀತಿ ಸಂಸದೀಯ ವ್ಯವಹಾರಗಳ ಸಚಿವಾಲಯ, ಶಾಂತಿಪಾಲನಾ ಸಚಿವಾಲಯಗಳನ್ನು ಮುಚ್ಚಲಾಗುತ್ತಿದೆ ಎಂದು ಬಿಲಾಲ್ ಹೇಳಿದ್ದಾರೆ.

ತಾಲಿಬಾನ್ ಸರ್ಕಾರ ಈಗಾಗಲೇ ಆಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ಮುಚ್ಚಿದ್ದು, ಇದೀಗ ಚುನಾವಣಾ ಆಯೋಗವನ್ನೂ ಕೂಡ ವಿಸರ್ಜಿಸಿದೆ.

ಇನ್ನು ತಾಲಿಬಾನ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಮಾತನಾಡಿರುವ ಹಿಂದಿನ ಆಡಳಿತದ ಪತನದವರೆಗೂ ಚುನಾವಣಾ ಆಯೋಗದ ಸಮಿತಿಯ ಮುಖ್ಯಸ್ಥರಾಗಿದ್ದ ಔರಂಗಜೇಬ್ ಅವರು, 'ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿದ್ದಾರೆ. ಆಯೋಗವನ್ನು ವಿಸರ್ಜಿಸುವುದು ಭಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಈ ರಚನೆಯು ಅಸ್ತಿತ್ವದಲ್ಲಿಲ್ಲದಿದ್ದರೆ, ಯಾವುದೇ ಚುನಾವಣೆಗಳಿಲ್ಲದ ಕಾರಣ ಅಫ್ಘಾನಿಸ್ತಾನದ ಸಮಸ್ಯೆಗಳನ್ನು ಎಂದಿಗೂ ಪರಿಹರಿಸಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಹಿಂದಿನ ಆಡಳಿತದ ಹಿರಿಯ ರಾಜಕಾರಣಿ ಹಲೀಮ್ ಫಿದಾಯಿ, 'ಚುನಾವಣಾ ಆಯೋಗವನ್ನು ವಿಸರ್ಜಿಸುವ ನಿರ್ಧಾರವು ತಾಲಿಬಾನ್ "ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ" ಎಂದು ತೋರಿಸುತ್ತದೆ. ಅವರು ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ವಿರುದ್ಧವಾಗಿದ್ದಾರೆ. ಅವರು ಬುಲೆಟ್‌ಗಳ ಮೂಲಕ ಅಧಿಕಾರವನ್ನು ಪಡೆಯುತ್ತಾರೆ. ಮತಯಂತ್ರಗಳ ಮೂಲಕ ಅಲ್ಲ ಎಂದು ಕಳೆದ 20 ವರ್ಷಗಳಲ್ಲಿ ನಾಲ್ಕು ಪ್ರಾಂತ್ಯಗಳ ಗವರ್ನರ್ ಆಗಿದ್ದ ಫಿದಾಯಿ ಹೇಳಿದ್ದಾರೆ.

SCROLL FOR NEXT