ವಿದೇಶ

ಸ್ಲಿಮ್ ಆಗಿ ಕಾಣಿಸಿಕೊಂಡ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್; ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹ!

Sumana Upadhyaya

ಸಿಯೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಬಗ್ಗೆ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಪ್ರತಿಸ್ಪರ್ಧಿ, ದಕ್ಷಿಣ ಕೊರಿಯಾ ಇದೀಗ ಮತ್ತೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಪ್ರಮುಖ ವದಂತಿಗಳನ್ನು ಹಬ್ಬಿಸುತ್ತಿದೆ.

ಕಿಮ್ ಜಾಂಗ್ ಉನ್ ಮತ್ತೆ ತೂಕ ಗಳಿಸಿಕೊಂಡಿದ್ದಾರೆಯೇ, ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ, ಇತ್ತೀಚೆಗೆ ಸರ್ಕಾರದ ಪ್ರಮುಖ ಕಾರ್ಯಕ್ರಮಕ್ಕೆ ಅವರು ಏಕೆ ಗೈರಾಗಿದ್ದರು ಇತ್ಯಾದಿ ಪ್ರಶ್ನೆಗಳು ದಕ್ಷಿಣ ಕೊರಿಯಾದ್ಯಂತ ಈ 37 ವರ್ಷದ ನಾಯಕನ ಬಗ್ಗೆ ಹರಿದಾಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಅವರು ಗಮನ ಸೆಳೆದಿದ್ದು ದೇಹದ ತೂಕ ಕಳೆದುಕೊಂಡ ಬಗ್ಗೆ.

ಕಿಮ್ ಅವರ ಆರೋಗ್ಯದ ಬಗ್ಗೆ ಸಿಯೋಲ್, ವಾಷಿಂಗ್ಟನ್, ಟೋಕ್ಯೋ ಮತ್ತು ಇತರ ವಿಶ್ವದ ರಾಷ್ಟ್ರಗಳ ರಾಜಧಾನಿಗಳಲ್ಲಿ ಸುದ್ದಿಯಾಗುತ್ತಿದೆ. ಕಿಮ್ ಅವರ ಆರೋಗ್ಯ ಅಷ್ಟು ಹದಗೆಟ್ಟಿದ್ದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮುಂದುವರಿಯುತ್ತಿರುವ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ಉತ್ತರಾಧಿಕಾರಿಯನ್ನು ಅವರು ಸಾರ್ವಜನಿಕವಾಗಿ ನೇಮಿಸುತ್ತಿರಲಿಲ್ಲ.

ನಾಯಕತ್ವದ ಆಂತರಿಕ ಕೆಲಸಗಳ ಬಗ್ಗೆ ಉತ್ತರ ಕೊರಿಯಾ ಯಾವತ್ತಿಗೂ ಬಹಿರಂಗವಾಗಿ ತೋರ್ಪಡಿಸಿಕೊಂಡಿಲ್ಲ. ಕಳೆದ ವರ್ಷ ಕೊರೋನಾ ವೈರಸ್ ಬಂದ ಮೇಲಂತೂ ಆಂತರಿಕ ಆಡಳಿತ ಇನ್ನೂ ಕಟ್ಟುನಿಟ್ಟಾಗಿದೆ. ಇತ್ತೀಚಿಗೆ ರಾಷ್ಟ್ರೀಯ ಮಾಧ್ಯಗಳಲ್ಲಿ ಬಂದ ವರದಿಯಂತೆ ಕಿಮ್ ಜಾಂಗ್ ಉನ್ ಬಹಳಷ್ಟು ತೂಕ ಕಳೆದುಕೊಂಡ ರೀತಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಅವರ ವಾಚು ಕಟ್ಟುವ ಭಾಗದಲ್ಲಿ ಮತ್ತು ಮುಖದಲ್ಲಿನ ಗುರುತಿನಿಂದ ತೆಳ್ಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. 170 ಸೆಂಟಿ ಮೀಟರ್ ಎತ್ತರ ಮತ್ತು 140 ಕೆಜಿ ತೂಕವಿದ್ದ ಕಿಮ್ ಈಗ 10ರಿಂದ 20 ಕೆಜಿ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆರೋಗ್ಯ ಸುಧಾರಿಸಿಕೊಳ್ಳಲು ಕಿಮ್ ತೂಕ ಕಳೆದುಕೊಂಡಿರಬಹುದು ಎಂದು ಭಾವಿಸಲಾಗುತ್ತಿದೆ.

ಅವರು ಅನಾರೋಗ್ಯ ಹೊಂದಿದ್ದರೆ, ಕಳೆದ ವಾರ ವರ್ಕರ್ಸ್ ಪಾರ್ಟಿಯ ಕೇಂದ್ರ ಸಮಿತಿಯ ಸಮಗ್ರ ಸಭೆಯನ್ನು ಕರೆಯಲು ಸಾರ್ವಜನಿಕವಾಗಿ ಹೊರಬರುತ್ತಿರಲಿಲ್ಲ ಎಂದು ದಕ್ಷಿಣ ಕೊರಿಯಾದ ಹಿರಿಯ ವಿಶ್ಲೇಷಕ ಹಾಂಗ್ ಮಿನ್ ಹೇಳುತ್ತಾರೆ.

ಅತಿಯಾದ ಮದ್ಯ ಸೇವನೆ ಮತ್ತು ಧೂಮಪಾನದ ಚಟ ಹೊಂದಿರುವ ಕಿಮ್ ಅವರ ಕುಟುಂಬಸ್ಥರಿಗೆ ಹೃದಯ ಸಮಸ್ಯೆಯಿದೆ. ಉತ್ತರ ಕೊರಿಯಾ ಆಳಿದ್ದ ಅವರ ತಂದೆ ಮತ್ತು ತಾತ ಇಬ್ಬರೂ ಹೃದಯ ಸಮಸ್ಯೆಯಿಂದ ಅಸುನೀಗಿದ್ದರು. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಅವರು ತೂಕ ಕಡಿಮೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

SCROLL FOR NEXT