ವಿದೇಶ

ಪ್ರಶ್ನೆಗೆ ಸಹನೆ ಕಳೆದುಕೊಂಡ ಜೋ ಬೈಡನ್‌.. ಕೊನೆಗೆ ಪತ್ರಕರ್ತನಿಗೆ ಕ್ಷಮೆಯಾಚನೆ!

Srinivas Rao BV

ಜಿನೀವಾ: ಸೌಮ್ಯ ಸ್ವಭಾವದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಾಧ್ಯಮಗಳ ಮುಂದೆ ಶಾಂತವಾಗಿರುತ್ತಾರೆ. ಆದರೆ, ಬುಧವಾರ ಅವರು ತಮ್ಮ ಸಹನೆಯನ್ನು ಕಳೆದುಕೊಂಡಿದ್ದರು.. ಎಲ್ಲರೂ ನೋಡುತ್ತಿರುವಾಗ, ಅವರು ವರದಿಗಾರರೊಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು".

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೊದಲ ಶೃಂಗಸಭೆ ನಡೆಸಿದ ನಂತರ ನಡೆದ  ಮಾಧ್ಯಮಗಳ ಸಮಾವೇಶದಲ್ಲಿ ಬೈಡನ್ ಮಾತನಾಡುತ್ತಿದ್ದಾಗ ಈ ಘಟನೆ ನಡೆಯಿತು. ನಂತರ ಅವರು ಆ ವರದಿಗಾರನಿಗೆ ಕ್ಷಮೆಯಾಚಿಸಿದರು.

ನಿಜಕ್ಕೂ ಬೈಡನ್ ಕೋಪಗೊಳ್ಳಲು ವರದಿಗಾರ ಕೇಳಿದ ಪ್ರಶ್ನೆ ಏನು?

ವ್ಲಾಡಿಮೀರ್ ಪುಟಿನ್ ಅವರೊಂದಿಗಿನ ಸಭೆಯ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ, ಸಿಎನ್ಎನ್ ಶ್ವೇತಭವನದ ವರದಿಗಾರ ಕೈಟ್ಲಾನ್ ಕಾಲಿನ್ಸ್ ಈ ಶೃಂಗಸಭೆ ನಂತರ ಪುಟಿನ್ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಲಿದ್ದಾರೆಯೇ ಎಂಬ ವಿಶ್ವಾಸವಿದೆಯೇ ಎಂದು ಪದೇ ಪದೇ ಪ್ರಶ್ನೆ ಕೇಳಿದರು. ಸೈಬರ್ ದಾಳಿ, ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತ ಪ್ರಶ್ನೆಗಳಿಗೆ ಪುಟಿನ್ ಅವರಿಂದ ಸೂಕ್ತ ಉತ್ತರ ಬಂದಿಲ್ಲ. ಹಾಗಾಗಿ ಶೃಂಗಸಭೆ ರಚನಾತ್ಮಕ ಸಭೆ ಹೇಗಾಗುತ್ತದೆ ಎಂದು ವರದಿಗಾರ  ಪ್ರಶ್ನೆಗಳ ಸರಣಿಯನ್ನೇ ಕೇಳಿದರು. ಇದರಿಂದ ವ್ಯಗ್ರಗೊಂಡ ಬೈಡನ್ ವರದಿಗಾರನ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಬೈಡನ್ ಉತ್ತರಿಸಿ, 'ಅವರು ತಮ್ಮ ನಡವಳಿಕೆ ಬದಲಾಯಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನನಗೆ  ನಂಬಿಕೆಯಿಲ್ಲ. ನನಗೆ ವಿಶ್ವಾಸವಿದೆ ಎಂದು ನಾನು ಯಾವಾಗ ಹೇಳಿದ್ದೇನೆ? ಎಂದು ವರದಿಗಾರನಿಗೆ ಮರು ಪ್ರಶ್ನೆ ಹಾಕಿದರು. ನಾನು ಯಾವುದನ್ನೂ ನಂಬುವುದಿಲ್ಲ. ನಾನು ಒಂದು ವಾಸ್ತವವನ್ನು ಹೇಳಿದ್ದೇನೆ. ನಿಮಗೆ ಅರ್ಥವಾಗದಿದ್ದರೆ ನಾನೇನು ಮಾಡಲು ಸಾಧ್ಯವಿಲ್ಲ 'ಎಂದು ಅಸಹನೆ ವ್ಯಕ್ತಪಡಿಸಿದರು. 

ನನ್ನ ಕಾರ್ಯಸೂಚಿ ರಷ್ಯಾ ಅಥವಾ ಬೇರೆ ದೇಶಗಳ ವಿರುದ್ಧವಲ್ಲ, ಇದು ಕೇವಲ ಅಮೆರಿಕಾ ಹಿತಾಸಕ್ತಿಗಾಗಿ ಮಾತ್ರ ಎಂದು ಬೈಡೆನ್ ಹೇಳಿದರು. ಮಾಧ್ಯಮ ಸಭೆಯ ಕೊನೆಯಲ್ಲಿ ಹೊರ ನಡೆಯುತ್ತಿದ್ದ ಬೈಡನ್ ಮತ್ತೆ ಹಿಂದೆ  ಸರಿದು ಆ ವರದಿಗಾರನಿಗೆ ಕ್ಷಮೆಯಾಚಿಸಿದರು.

SCROLL FOR NEXT