ವಿದೇಶ

'ಕೊರೋನಾ ವೈರಸ್ ಮೂಲದ ಶೋಧ ಪೂರ್ಣಗೊಂಡಿಲ್ಲ'; ಚೀನಾ ಬೆಂಬಿಡದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ

Srinivasamurthy VN

ವಾಷಿಂಗ್ಟನ್: ಇಡೀ ಜಗತ್ತೀಗೇ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲದ ಕುರಿತ ತನಿಖೆ ಮತ್ತು ಶೋಧ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳುವ ಮೂಲಕ ಚೀನಾದಲ್ಲಿ ಮತ್ತಷ್ಟು ತನಿಖೆ ಮಾಡಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಮುಂದಾಗಿದೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ತಂಡವೊಂದು ಚೀನಾಗೆ ತೆರಳಿ ಕೊರೋನಾ ವೈರಸ್ ಮೂಲದ ಶೋಧ ನಡೆಸಿತ್ತು. ಆದರೆ ಇದರಲ್ಲಿ ಅಂತಹ ಹೇಳಿಕೊಳ್ಳುವಂತಹ ಮಾಹಿತಿ ಲಭ್ಯವಾಗಿರಲಿಲ್ಲ. ಈ ಹಿಂದೆ ಚೀನಾ ಹೇಳಿಕೊಂಡಿದ್ದ ಅಂಶಗಳನ್ನೇ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಕೂಡ ಪ್ರತಿಪಾದಿಸಿತ್ತು. ಅಲ್ಲಿಗೆ  ಈ ಪ್ರಕರಣ ಮುಕ್ತಾಯವೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಕೊರೋನಾ ವೈರಸ್ ಮೂಲದ ಶೋಧ ಪೂರ್ಣಗೊಂಡಿಲ್ಲ ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಮತ್ತೆ ಜೀವ ನೀಡಿದೆ.

ಕೊರೋನ ವೈರಸ್ನ ಮೂಲ ಇನ್ನೂ ನಿಗೂಢವಾಗಿದೆ, ಹಾಗಾಗಿ ವೈರಸ್ ಪ್ರಯೋಗಾಲಯವೊಂದರಿಂದ ಸೋರಿಕೆಯಾಯಿತು ಎಂಬ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ವಿಜ್ಞಾನಿಗಳ ಗುಂಪೊಂದು ಹೇಳಿದೆ. 2019ರ ಅಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್-19 ಈವರೆಗೆ  ಜಗತ್ತಿನಾದ್ಯಂತ ಸುಮಾರು 33.4 ಲಕ್ಷ ಮಂದಿಯನ್ನು ಬಲಿ ಪಡೆದಿದೆ. ಅಂತೆಯೇ ಬೃಹತ್ ಪ್ರಮಾಣದ ಜನರ ಆದಾಯ ನಷ್ಟವಾಗಿದ್ದು, ನಿರಂತರ ಲಾಕ್ ಡೌನ್ ಮತ್ತು ನಿರ್ಬಂಧಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳ ಜಿಡಿಪಿ ನೆಲಕಚ್ಚಿದೆ. ನೂರಾರು ಕೋಟಿ ಜನರ ಬದುಕು ಜರ್ಝರಿತಗೊಂಡಿದ್ದು, ಸಾಂಕ್ರಾಮಿಕದ  ಮೂಲವನ್ನು ನಿರ್ಧರಿಸಲು ಈಗಲೂ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು 18 ವಿಜ್ಞಾನಿಗಳು ತಂಡವೊಂದು ಅಭಿಪ್ರಾಯಪಟ್ಟಿದ್ದಾರೆ. 

ವಿಜ್ಞಾನಿಗಳ ತಂಡದಲ್ಲಿ ಭಾರತೀಯ
ಇನ್ನು ಈ 18 ವಿಜ್ಞಾನಿಗಳ ತಂಡದಲ್ಲಿ ಭಾರತ ಮೂಲದ ವಿಜ್ಞಾನಿ ಡಾ.ರವೀಂದ್ರ ಗುಪ್ತ ಅವರೂ ಕೂಡ ಇದ್ದು, ಗುಪ್ತಾ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕ್ಲಿನಿಕಲ್ ಮೈಕ್ರೋಬಯಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತೆಯೇ ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ನಲ್ಲಿ ವೈರಸ್ಗಳ ವಿಕಾಸದ ಬಗ್ಗೆ  ಅಧ್ಯಯನ ನಡೆಸುತ್ತಿರುವ ಜೆಸ್ಸಿ ಬ್ಲೂಮ್ ಕೂಡ ಈ ತಂಡದಲ್ಲಿದ್ದಾರೆ ಎಂದು ತಿಳಿದುಬಂದಿದೆ.
 

SCROLL FOR NEXT