ವಿದೇಶ

ಭಾರತದಲ್ಲಿ ಕಳೆದ ವಾರದಲ್ಲಿ ಶೇ.13ರಷ್ಟು ಹೊಸ ಕೋವಿಡ್ ಸೋಂಕು ಪ್ರಕರಣಗಳ ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ

Srinivasamurthy VN

ವಿಶ್ವಸಂಸ್ಥೆ: ಕಳೆದೊಂದು ವಾರದ ಅವಧಿಯಲ್ಲಿ ಭಾರತದ ಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಾರಕ ಕೊರೋನಾ ಸಾಂಕ್ರಾಮಿಕದ 2ನೇ ಅಲೆಯಲ್ಲಿ ತತ್ತರಿಸಿ ಹೋಗಿದ್ದ ಭಾರತದಲ್ಲಿ ಕಳೆದೊಂದು ವಾರದಲ್ಲಿ ಸೋಂಕು ಪ್ರಮಾಣ ಇಳಿಕೆಯಾಗಿದ್ದು, ಸೋಂಕು ಪ್ರಮಾಣದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ. ಆದರೆ ಹೊಸ ಸೋಂಕು ಪ್ರಕರಣಗಳ ವಿಚಾರದಲ್ಲಿ ಇನ್ನೂ ವಿಶ್ವಾದ್ಯಂತ ಅತೀ ಹೆಚ್ಚಿದೆ ಎಂದು ಹೇಳಿದೆ.

ಜಗತ್ತಿನಾದ್ಯಂತ 4.8 ಮಿಲಿಯನ್ ಹೊಸ ಪ್ರಕರಣಗಳು ದಾಖಲಾಗಿದ್ದು, 86,000 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಹಿಂದಿನ ವಾರಕ್ಕೆ ಹೋಲಿಸಿದರೆ ಸೋಂಕು ಪ್ರಮಾಣ ಶೇಕಡಾ 12 ರಷ್ಟು ಮತ್ತು ಸಾವಿನ ಸಂಖ್ಯೆ 5 ರಷ್ಟು ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ದತ್ತಾಂಶಗಳ ಅನ್ವಯ  ಭಾರತದಲ್ಲಿ ಅತೀ ಹೆಚ್ಚು (2,387,663) ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಹಿಂದಿನ ವಾರದ ದೈನಂದಿನ ಸೋಂಕು ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಇದು ಶೇ.13ರಷ್ಟು ಕಡಿಮೆ ಎಂದು ಹೇಳಿದೆ. 

ಭಾರತದ ಬಳಿಕ ಬ್ರೆಜಿಲ್ (437,076 ಹೊಸ ಪ್ರಕರಣಗಳು;  ಶೇ3 ರಷ್ಟು ಹೆಚ್ಚಳ), ಅಮೇರಿಕ (235,638 ಹೊಸ ಪ್ರಕರಣಗಳು; ಶೇ.21 ರಷ್ಟು ಕಡಿಮೆಯಾಗಿದೆ), ಅರ್ಜೆಂಟೀನಾ (151,332 ಹೊಸ ಪ್ರಕರಣಗಳು; ಶೇ.8 ರಷ್ಟು ಹೆಚ್ಚಳ) ಮತ್ತು ಕೊಲಂಬಿಯಾ (115,834 ಹೊಸ ಪ್ರಕರಣಗಳು; ಶೇ.6 ರಷ್ಟು ಹೆಚ್ಚಳ).  ಭಾರತದಿಂದ ಅತಿ ಹೆಚ್ಚು ಹೊಸ ಸಾವುಗಳು ವರದಿಯಾಗಿವೆ (27,922 ಹೊಸ ಸಾವುಗಳು; 100,000 ಕ್ಕೆ 2.0 ಹೊಸ ಸಾವುಗಳು; 4 ಶೇಕಡಾ ಹೆಚ್ಚಳ), ನೇಪಾಳ ಮತ್ತು ಇಂಡೋನೇಷ್ಯಾ ಇದೆ.

ಮೇ 9 ರ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ ರಾಷ್ಟ್ರೀಯ ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಭಾರತವು ಅತಿ ಹೆಚ್ಚು ಹೊಸ ಪ್ರಕರಣಗಳನ್ನು (2,738,957) ಎಂದು ದಾಖಲಿಸಿದೆ, ಇದು ಹಿಂದಿನ ವಾರಕ್ಕಿಂತ 5 ಶೇಕಡಾ ಹೆಚ್ಚಾಗಿದೆ. ಡಬ್ಲ್ಯುಎಚ್‌ಒ ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರಸ್ತುತ ಸಕ್ರಿಯ  ಪ್ರಕರಣಗಳು ಸಂಖ್ಯೆ ಸುಮಾರು 24.68 ಮಿಲಿಯನ್ ಇದ್ದು, ಮತ್ತು ಒಟ್ಟು ಸಾವುಗಳು ಸುಮಾರು 270,284 ರಷ್ಟಿದೆ. 

ಇನ್ನು ಸತತ ಒಂಬತ್ತು ವಾರಗಳ ಹೆಚ್ಚಳದ ನಂತರ ದೈನಂದಿನ ಸೋಂಕು ಪ್ರಕರಣದ ಪ್ರಮಾಣವು ಕಡಿಮೆಯಾಗಿದೆ. ಆದರೆ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಸಂಪೂರ್ಣ ಸಂಖ್ಯೆ ಅದರ ಗರಿಷ್ಠ ಮಟ್ಟದಲ್ಲೇ ಉಳಿದಿದೆ. ಅಂತೆಯೇ ಸತತ ಒಂಬತ್ತನೇ ವಾರದಲ್ಲೂ ಕೂಡ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇನ್ನು ಜಾಗತಿಕವಾಗಿಯೂ ಸೋಂಕು ಪ್ರಮಾಣ ಕುಸಿತವಾಗುತ್ತಿದ್ದು, ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಈ ವಾರ ಹೊಸ ಪ್ರಕರಣಗಳಲ್ಲಿ ಅತಿದೊಡ್ಡ ಕುಸಿತ ಕಂಡಿದೆ. 

SCROLL FOR NEXT