ವಿದೇಶ

ಗಾಜಾದಲ್ಲಿ ನಿಲ್ಲದ ಇಸ್ರೇಲ್‌ ದಾಳಿ; ಆರು ಅಂತಸ್ತಿನ ಕಟ್ಟಡ ನೆಲಸಮ 

Srinivasamurthy VN

ಗಾಜಾ ನಗರ: ಹಮಾಸ್ ಉಗ್ರರನ್ನು ಅಂತ್ಯಗೊಳಿಸಬೇಕು ಎಂದು ಗುರಿಯಾಗಿಸಿಕೊಂಡಿರುವ ಇಸ್ರೇಲ್ ಮಂಗಳವಾರ ಕೂಡ ಭಾರಿ ಪ್ರಮಾಣದ ವೈಮಾನಿಕ ದಾಳಿಗಳನ್ನು ನಡೆಸಿದೆ.

ಗಾಜಾ ನಗರದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಪುಸ್ತಕ ಮಾರಾಟ ಮಳಿಗೆಗಳನ್ನು ಒಳಗೊಂಡಿದ್ದ ಆರು ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಅದರಲ್ಲಿ ವಾಸವಾಗಿದ್ದವರಿಗೆ ಮೊದಲೇ ಎಚ್ಚರಿಕೆ ನೀಡಿ ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಮಾಸ್ ಕಮಾಂಡರ್‌ಗಳ ನಿವಾಸಗಳು ಸೇರಿದಂತೆ 65 ಸ್ಥಳಗಳ ಮೇಲೆ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ. 

ಈ ಕಾರ್ಯಾಚರಣೆಯಲ್ಲಿ 60 ಕ್ಕೂ ಹೆಚ್ಚು ಜೆಟ್‌ಗಳು ಭಾಗಿಯಾಗಿದ್ದವು. ವೈಮಾನಿಕ ದಾಳಿಗಳಿಂದಾಗಿ ವೈದ್ಯಕೀಯ ಸೇವೆಗಳು ತೀವ್ರ ಅಸ್ತವ್ಯಸ್ತಗೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಮತ್ತೊಂದೆಡೆ, ಹಮಾಸ್ ಕೂಡ ಇಸ್ರೇಲ್ ಮೇಲೆ ಮೇಲೆ ರಾಕೆಟ್ ಗಳ ಮಳೆಯನ್ನೇ ಸುರಿಸಿದೆ. ದಕ್ಷಿಣ ಇಸ್ರೇಲ್ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಥಾಯ್‌ಲ್ಯಾಂಡ್‌ ಸೇರಿದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಇಸ್ರೇಲ್ ನಲ್ಲಿ ಆಂತರಿಕ ಘರ್ಷಣೆಗಳು ಸ್ಫೋಟಗೊಂಡಿವೆ. ಇಸ್ರೇಲ್‌ನ ವಿವಿಧ ನಗರಗಳಲ್ಲಿ ವಾಸಿಸುವ ಪ್ಯಾಲೆಸ್ಟೀನಿಯನ್ನರು ಒಂದುಗೂಡಿ ಪ್ರತಿಭಟನೆಗೆ ಇಳಿದಿದ್ದಾರೆ. ಸೇನಾ ಚೆಕ್‌ಪೋಸ್ಟ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇಸ್ರೇಲ್ - ಪ್ಯಾಲೆಸ್ತೀನಿಯರ ನಡುವೆ ಉಂಟಾಗಿರುವ ಘರ್ಷಣೆ ತಗ್ಗಿಸುವ ದಿಶೆಯಲ್ಲಿ ಅಮೆರಿಕಾ ಮಹತ್ವದ ಹೇಳಿಕೆ ನೀಡಿದೆ. ಅಧ್ಯಕ್ಷ ಜೋ ಬೈಡನ್ ಕದನ ವಿರಾಮವನ್ನು ಬೆಂಬಲಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ದೂರವಾಣಿ ಮಾತುಕತೆಯಲ್ಲಿ ಈ  ವಿಷಯವನ್ನು ಸ್ಪಷ್ಟಪಡಿಸಲಾಗಿದೆ. ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಪ್ರಾದೇಶಿಕ ಅರಬ್ ಹಾಗೂ ಪ್ಯಾಲೇಸ್ಟಿನಿಯನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಗಾಜಾದಲ್ಲಿನ ಕಟ್ಟಡಗಳ ಮೇಲಿನ ದಾಳಿಯನ್ನು ಇಸ್ರೇಲ್‌ಅಮೆರಿಕದ ಗಮನಕ್ಕೆ  ತಂದಿದೆ. ಗಾಜಾವನ್ನು ಪುನರ್ನಿರ್ಮಿಸಲು 50 ಕೋಟಿ ನೆರವು ನೀಡುವುದಾಗಿ ಈಜಿಪ್ಟ್ ಘೋಷಿಸಿದೆ.

SCROLL FOR NEXT