ವಿದೇಶ

ಸಾಕಷ್ಟು ಪ್ರದೇಶಗಳಲ್ಲಿ ಶೋಧ, ಆದರೆ ಮೆಹುಲ್ ಚೋಕ್ಸಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ: ಆ್ಯಂಟಿಗುವಾ ಪೊಲೀಸರು

Srinivasamurthy VN

ನವದೆಹಲಿ: ನಾಪತ್ತೆಯಾಗಿರುವ ಪಿಎನ್ ಬಿ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರದೇಶಗಲ್ಲಿ ಶೋಧ ನಡೆಸಲಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಆ್ಯಂಟಿಗುವಾ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಆ್ಯಂಟಿಗುವಾ ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿಸ ಅವರು, 'ಸ್ಥಳೀಯ ಪೊಲೀಸರು ಕೂಡ ಚೋಕ್ಸಿ ಕಾಣೆಯಾಗಿರುವ ಕುರಿತು ದೃಢಪಡಿಸಿದ್ದು, ಚೋಕ್ಸಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಸಾಕಷ್ಟು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು,  ಈ ಶೋಧ ಕಾರ್ಯಾಚರಣೆಯಿಂದ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. 

ಚೋಕ್ಸಿ ಕೊನೆಯ ಬಾರಿಗೆ ಭಾನುವಾರ ಸಂಜೆ 5.15ರ ಹೊತ್ತಿನಲ್ಲಿ ತಮ್ಮ ಮನೆಯಿಂದ ಹೊರಗೆ ಕಾರಿನಲ್ಲಿ ತೆರಳಿದ್ದರು. ಈ ಕುರಿತು ಸ್ಥಳೀಯ ಪೊಲೀಸರು ಸ್ಥಳೀಯರ ವಿಚಾರಣೆ ನಡೆಸಿದ್ದಾರೆ. ಅಂತೆಯೇ ಚೋಕ್ಸಿ ಕುರಿತು ಯಾವುದೇ ಮಾಹಿತಿ ಲಭ್ಯವಾದರೂ ಜಾನ್ಸನ್ ಪಾಯಿಂಟ್ ಪೊಲೀಸ್ ಠಾಣೆಗೆ ಮಾಹಿತಿ  ನೀಡುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಆ್ಯಂಟಿಗುವಾದ Criminal Investigations Department (ಸಿಐಡಿ) ಕ್ರಿಮಿನಲ್ ತನಿಖಾ ದಳ ನಡೆಸುತ್ತಿದೆ ಎನ್ನಲಾಗಿದೆ.

ಕೆರಿಬಿಯನ್ ರಾಷ್ಟ್ರ ಆ್ಯಂಟಿಗುವಾದ ಪೌರತ್ವ ಪಡೆದಿರುವ ಮೆಹುಲ್ ಚೋಕ್ಸಿ ಭಾನುವಾರದಿಂದ ನಾಪತ್ತೆಯಾಗಿದ್ದಾರೆ. ಆತನ ಕುಟುಂಬ ಮತ್ತು ಸ್ಥಳೀಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.

ಮೆಹುಲ್ ಚೋಕ್ಸಿ ಸೋಮವಾರ ಸಂಜೆ ದ್ವೀಪದ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಹೋಗಲು ತಮ್ಮ ಮನೆಯಿಂದ ಹೊರಟಿದ್ದ. ಆದರೆ ಮತ್ತೆ ಕಾಣಿಸಲಿಲ್ಲ. ಅವರ ವಾಹನವನ್ನು ಸಂಜೆ ಜಾಲಿ ಹಾರ್ಬರ್‌ನಲ್ಲಿ ಪತ್ತೆ ಮಾಡಲಾಗಿದೆ. ಆದರೆ ಚೋಕ್ಸಿ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ ಎಂದು  ಆಂಟಿಗುವಾನ್ ಸುದ್ದಿ ವಾಹಿನಿಗಳು ವರದಿ ಮಾಡಿವೆ. 

SCROLL FOR NEXT