ವಿದೇಶ

ಚೀನಾದ ಪ್ರಯೋಗಾಲಯದಿಂದಲೇ ಕೋವಿಡ್ ವೈರಾಣು ಸೋರಿಕೆ: ಬ್ರಿಟನ್ ಗುಪ್ತಚರ ವರದಿ

Srinivas Rao BV

ಲಂಡನ್: ಕೊರೋನಾ ಕರಿನೆರಳು ಪ್ರಪಂಚವನ್ನು ಆವರಿಸಿ ಹತ್ತಿರ ಹತ್ತಿರ 2 ವರ್ಷಗಳಾಗುತ್ತಿದೆ. ಇದಕ್ಕೆ ಚೀನಾ ಪ್ರಯೋಗಾಲಯವನ್ನು ಗುರಿಯಾಗಿರಿಸಿಕೊಂಡು ಪ್ರಕಟವಾಗುತ್ತಿದ್ದ ವರದಿಗಳಿಗೆ ಬ್ರಿಟನ್ ಸಹ ಧ್ವನಿಗೂಡಿಸಿದೆ. 

ಬ್ರಿಟನ್ ನ ಗುಪ್ತಚರ ಏಜೆನ್ಸಿಗಳ ಇತ್ತೀಚಿನ ಹೇಳಿಕೆಯ ಪ್ರಕಾರ ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಚೀನಾದ ಬಯೋ ಪ್ರಯೋಗಾಲಯದಿಂದಲೇ ಸೋರಿಕೆಯಾಗಿರುವುದರ ಸಾಧ್ಯತೆ ಇದೆ ಎಂದು ಹೇಳಿದೆ. 

ಬ್ರಿಟನ್ ನ ಲಸಿಕೆ ಸಚಿವ ನಧೀಮ್ ಝಹಾವಿ ಮಾರಕ ವೈರಾಣುವಿನ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಸಂಪೂರ್ಣ ತನಿಖೆ ನಡೆಸಬೇಕೆಂದು ಹೇಳಿದೆ. 

ಕೋವಿಡ್-19 ಮೂಲ ವಿಸ್ತೃತ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದ್ದು, ಪ್ರಯೋಗಾಲಯದಿಂದಲೇ ಈ ಮಾರಕ ವೈರಾಣು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ರಾಜಕಾರಣಿಗಳು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಸಾಂಕ್ರಾಮಿಕ ಪ್ರಾರಂಭದ ದಿನಗಳಲ್ಲಿ ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಕೊರೋನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಸಾಧ್ಯತೆಗಳು ಕ್ಷೀಣ ಎಂದು ಹೇಳಿ, ಬಾವಲಿಗಳ ಮೂಲಕ ಕೊರೋನಾ ಹರಡಿರುವ ಜಾಡನ್ನು ಹಿಡಿದು ಸಂಶೋಧನೆ ನಡೆಸಿತ್ತು. 

ಆದರೆ ಈಗ ಅದೇ ಗುಪ್ತಚರ ಸಂಸ್ಥೆಗಳು ಪ್ರಯೋಗಾಲಯದಿಂದಲೇ ಕೊರೋನಾ ವೈರಾಣು ಹರಡಿರುವ ಸಾಧ್ಯತೆಗಳಿವೆ ಎಂದು ಹೇಳುತ್ತಿರುವುದನ್ನು ಸಂಡೇ ಟೈಮ್ಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. 

ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಇರುವುದು ಚೀನಾದಲ್ಲಿ ಕೊರೋನಾದ ಮೂಲ ಸ್ಥಾನವೆಂದು ನಂಬಲಾಗಿರುವ ವುಹಾನ್ ನಲ್ಲಿರುವ ಸೀಫುಡ್ ಮಾರ್ಕೆಟ್ ನ ಬಳಿ ಎಂಬುದು ಗಮನಾರ್ಹ ಅಂಶ. 

ಸಾಕ್ಷ್ಯಗಳು ನಮ್ಮನ್ನು ಬೇರೆ ಬೇರೆ ದಿಕ್ಕಿನಲ್ಲಿ ಯೋಚನೆ ಮಾಡುವಂತೆ ಮಾಡುತ್ತದೆ, ಆದರೆ ಚೀನಾದವರು ಹೇಗಿದ್ದರೂ ಸುಳ್ಳು ಹೇಳುತ್ತಾರೆ. ಹೀಗಿರುವಾಗ ನಮಗೆ ಕೊರೋನಾದ ಮೂಲ ಎಂದಿಗೂ ತಿಳಿಯುವುದಿಲ್ಲ ಎಂದು ಬ್ರಿಟನ್ ನ ಗುಪ್ತಚರ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. 

ಪಾಶ್ಚಿಮಾತ್ಯ ಏಜೆನ್ಸಿಗಳು ಚೀನಾದಲ್ಲಿ ಗುಪ್ತಚರ ಇಲಾಖೆ ಚೀನಾದಲ್ಲಿ ಕೆಲವು ಮಾನವ ಗುಪ್ತಚರ ಮೂಲಗಳನ್ನು ಹೊಂದಿದ್ದು, ಮಾಹಿತಿ ಸಂಗ್ರಹಿಸುತ್ತಿವೆ, ಹೆಸರು, ತಮ್ಮ ವಿವರಗಳನ್ನು ನೀಡಲು ಬಯಸದ ಚೀನಾದ ಉದ್ಯೋಗಿಗಳು ಕೆಲವು ರಹಸ್ಯಗಳನ್ನು ಈ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. 

ಕೊರೋನಾ ವೈರಾಣು ಪ್ರಯೋಗಾಲಯದಲ್ಲಿ ಸೋರಿಕೆಯಾಗಿದೆ ಎಂಬ ವಾದಕ್ಕೆ ಈಗ ಬ್ರಿಟನ್ ಸಹ ಧ್ವನಿಗೂಡಿಸಿದ್ದು, ತನಿಖೆ ನಡೆಸುವುದಕ್ಕೆ ಡಬ್ಲ್ಯುಹೆಚ್ಒ ಮೇಲೆ ಮತ್ತಷ್ಟು ಒತ್ತಡ ಉಂಟಾಗಿದೆ.

SCROLL FOR NEXT