ವಿದೇಶ

2021-25ರ ಅವಧಿಗೆ ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆ!

Vishwanath S

ವಿಶ್ವಸಂಸ್ಥೆ: 2021-25ರ ಅವಧಿಗೆ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಭಾರತ ಜಯಗಳಿಸಿದೆ.

ಭಾರತವು ಈ ಮರುಚುನಾವಣೆಯಲ್ಲಿ 164 ಮತಗಳನ್ನು ಪಡೆಯುವ ಮೂಲಕ 2021-25ರವರೆಗೆ ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಯಾಗಿದೆ ಎಂದು ಪ್ಯಾರಿಸ್ ಮೂಲದ ಯುನೆಸ್ಕೋದ ಭಾರತದ ಖಾಯಂ ನಿಯೋಗ ಟ್ವೀಟ್ ಮಾಡಿದೆ.

ಕಾರ್ಯಕಾರಿ ಮಂಡಳಿಯ ಸದಸ್ಯರ ಆಯ್ಕೆ ಬುಧವಾರ ನಡೆಯಿತು. ಗ್ರೂಪ್​ ನಾಲ್ಕರಲ್ಲಿ ಏಷ್ಯನ್ ಮತ್ತು ಪೆಸಿಫಿಕ್ ದೇಶಗಳು, ಜಪಾನ್, ಫಿಲಿಪೈನ್ಸ್, ವಿಯೆಟ್ನಾಂ, ಕುಕ್ ದ್ವೀಪಗಳು ಮತ್ತು ಚೀನಾ ಆಯ್ಕೆಯಾದವು.

ಯುನೆಸ್ಕೋ ಎಕ್ಸಿಕ್ಯೂಟಿವ್ ಬೋರ್ಡ್ ಯುಎನ್ ಏಜೆನ್ಸಿಯ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. ಜನರಲ್ ಕಾನ್ಫರೆನ್ಸ್​​ನ ಅಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಪ್ರಧಾನ ನಿರ್ದೇಶಕರು ಸಲ್ಲಿಸುವ ಬಜೆಟ್ ಅಂದಾಜಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಮಂಡಳಿಯು ಪರಿಶೀಲನೆ ನಡೆಸುತ್ತದೆ.

ಯುನೆಸ್ಕೋ ವೆಬ್ ಸೈಟ್ ನ ಪ್ರಕಾರ, ಇದು ನಾಲ್ಕು ವರ್ಷಗಳ ಅಧಿಕಾರಾವಧಿಯೊಂದಿಗೆ 58 ಸದಸ್ಯ-ರಾಜ್ಯಗಳನ್ನು ಒಳಗೊಂಡಿದೆ.

SCROLL FOR NEXT