ವಿದೇಶ

ಭಾರತದೊಂದಿಗಿನ ಸಂಬಂಧವನ್ನು ಮೂರನೇ ದೇಶದ ಮೂಲಕ ನೋಡಬೇಡಿ: ವಿದೇಶಾಂಗ ಸಚಿವರ ಮಾತಿಗೆ ಚೀನಾ ಸಹಮತ 

Sumana Upadhyaya

ಬೀಜಿಂಗ್: ಬೀಜಿಂಗ್ ಭಾರತದೊಂದಿಗಿನ ತನ್ನ ಸಂಬಂಧವನ್ನು ಮೂರನೇ ರಾಷ್ಟ್ರದ ಮೂಲಕ ನೋಡಬಾರದು, ಚೀನಾ-ಭಾರತ ಸಂಬಂಧಗಳು ತಮ್ಮದೇ ಆದ "ಆಂತರಿಕ ತರ್ಕವನ್ನು" ಹೊಂದಿವೆ ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರತಿಪಾದನೆಯನ್ನು ಒಪ್ಪುವುದಾಗಿ ಚೀನಾ ಶುಕ್ರವಾರ ಹೇಳಿದೆ.

ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಬಗೆಹರಿಯದೇ ಉಳಿದಿರುವ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಕಂಡುಹಿಡಿಯಲು ಎರಡೂ ದೇಶಗಳು ಕಾರ್ಯಪ್ರವೃತ್ತವಾಗಬೇಕೆಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಉಭಯ ದೇಶಗಳು ಪರಸ್ಪರ ಗೌರವದ ಆಧಾರದ ಮೇಲೆ ಸಂಬಂಧವನ್ನು ಸ್ಥಾಪಿಸಬೇಕಾಗಿದೆ, ಇದಕ್ಕಾಗಿ ಚೀನಾವು ಭಾರತದೊಂದಿಗಿನ ಸಂಬಂಧವನ್ನು ಮೂರನೇ ರಾಷ್ಟ್ರಗಳೊಂದಿಗಿನ ಸಂಬಂಧದ ದೃಷ್ಟಿಕೋನದಿಂದ ನೋಡಬಾರದು ಎಂದು ಜೈಶಂಕರ್ ಚೀನಾ ವಿದೇಶಾಂಗ ಸಚಿವರಿಗೆ ಮನದಟ್ಟು ಮಾಡಿದ್ದಾರೆ.

ಜೈಶಂಕರ್ ಅವರ ಹೇಳಿಕೆಗೆ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಜಾವೊ ಲಿಜಿಯಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಭಾರತದ ಹೇಳಿಕೆಯನ್ನು ನಾವು ಒಪ್ಪುತ್ತೇವೆ. ಚೀನಾ ಮತ್ತು ಭಾರತ ಎರಡೂ ಏಷ್ಯಾ ಖಂಡದ ಪ್ರಮುಖ ದೇಶಗಳಾಗಿವೆ.ಉಭಯ ದೇಶಗಳು ಸಂಬಂಧಗಳನ್ನು ಬೆಳೆಸಿಕೊಳ್ಳಲು ಒಂದು ಅಂತರ್ಗತ ಅಗತ್ಯ ತರ್ಕವಿದೆ. ಚೀನಾ-ಭಾರತ ಸಂಬಂಧಗಳು ಯಾವುದೇ ಮೂರನೇ ವ್ಯಕ್ತಿಯನ್ನು ಗುರಿಯಾಗಿರಿಸಿಕೊಳ್ಳುವುದಿಲ್ಲ ಎಂದು ಜಾವೊ ಹೇಳಿದ್ದಾರೆ.

ಇತ್ತೀಚೆಗೆ ಎರಡೂ ದೇಶಗಳ ನಡುವೆ ನಡೆದ ವಿದೇಶಾಂಗ ಮತ್ತು ಮಿಲಿಟರಿ ಇಲಾಖೆಗಳ ಮಾತುಕತೆ ಪರಿಣಾಮಕಾರಿಯಾಗಿದ್ದು ಗಡಿಭಾಗದಲ್ಲಿ ಒಟ್ಟಾರೆ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ, ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಮೇ 5 ರಂದು ಪಾಂಗಾಂಗ್ ಸರೋವರ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಗಡಿ ಬಿಕ್ಕಟ್ಟು ಭುಗಿಲೆದ್ದಿತು ಎರಡೂ ಕಡೆಯಿಂದ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಲಾಗಿತ್ತು. 
ಸರಣಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಪರಿಣಾಮವಾಗಿ, ಉಭಯ ದೇಶಗಳು ಕಳೆದ ತಿಂಗಳು ಗೋಗ್ರಾ ಪ್ರದೇಶದಲ್ಲಿ ಬೇರ್ಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ, ಉಭಯ ದೇಶಗಳು ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿದ್ದಾರೆ. ವಾಂಗ್ ಮತ್ತು ಜೈಶಂಕರ್ ಜುಲೈ 14 ರಂದು ತಜಾಕಿಸ್ತಾನ್ ದುಶಾನ್‌ಬೆಯಲ್ಲಿ ನಡೆದ ಎಸ್‌ಸಿಒನ ಇನ್ನೊಂದು ಸಮಾವೇಶದಲ್ಲಿ ದ್ವಿಪಕ್ಷೀಯ ಸಭೆಯನ್ನು ನಡೆಸಿದ್ದರು.

SCROLL FOR NEXT