ವಿದೇಶ

ಸೆ.23ಕ್ಕೆ ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ, ಮಾತುಕತೆ

Sumana Upadhyaya

ವಾಷಿಂಗ್ಟನ್: ಇದೇ 23ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅದರ ಮರುದಿನ ಪ್ರಧಾನಿಯವರು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರನ್ನು ಭೇಟಿ ಮಾಡಿ ಶ್ವೇತ ಭವನದಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಜೊ ಬೈಡನ್ ಮಧ್ಯೆ ಅವರು ಅಧ್ಯಕ್ಷರಾದ ನಂತರ ಮುಖತಃ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ನಂತರ ಶ್ವೇತಭವನದಲ್ಲಿ ಕ್ವಾಡ್ ನಾಯಕರ ಶೃಂಗಸಭೆ ನಡೆಯಲಿದ್ದು, ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಕೂಡ ಭಾಗವಹಿಸುತ್ತಿದ್ದಾರೆ.

ಸೆಪ್ಟೆಂಬರ್ 23ರಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ-ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ವೈಯಕ್ತಿಕ ಭೇಟಿಯಾಗಿದೆ. ಇದಕ್ಕೂ ಮುನ್ನ ಉಭಯ ನಾಯಕರು ಕೋವಿಡ್-19 ಬಿಕ್ಕಟ್ಟು ಬಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸುತ್ತಿದ್ದರು. ಅಮೆರಿಕ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್.

ಈ ವಾರದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಶ್ವ ನಾಯಕರು ನ್ಯೂಯಾರ್ಕ್‌ ನಲ್ಲಿ ಸೇರುತ್ತಿದ್ದು, ಕಮಲಾ ಹ್ಯಾರಿಸ್ ಅವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭೇಟಿ ಮಾಡಿ ಸಭೆ ನಡೆಸಲು ನಿರ್ಧರಿಸಿದ್ದಾರೆ, ಜಾಂಬಿಯಾ ಅಧ್ಯಕ್ಷ ಹಕೈಂಡೆ ಹಿಚಿಲೆಮಾ ಅವರ ಜೊತೆ ನಾಳೆ ಮತ್ತು ಘಾನಾ ನಾನಾ ಅಡ್ಡೊ ಅಧ್ಯಕ್ಷ ದಾಂಕ್ವಾ ಅಕುಫೊ-ಅಡ್ಡೊ ಅವರ ಜೊತೆ ಗುರುವಾರ ಸಭೆ ನಡೆಸಲಿದ್ದಾರೆ.

SCROLL FOR NEXT