ವಿದೇಶ

ತಮ್ಮ ಮೇಲೆ ಗೂಢಚಾರಿಕೆ ನಡೆಸಿದ್ದ ಆರೋಪ: ಸಿಐಎ ವಿರುದ್ಧ ಜೂಲಿಯನ್ ಅಸ್ಸಾಂಜೆ ವಕೀಲರಿಂದ ದಾವೆ

Srinivas Rao BV

ವಾಷಿಂಗ್ ಟನ್: ವಿಕೀಲಿಕ್ಸ್ ಫೌಂಡರ್ ಜೂಲಿಯನ್ ಅಸ್ಸಾಂಜೆ ವಕೀಲರು ಸಿಐಎ ವಿರುದ್ಧ ತಮ್ಮ ಮೇಲೆ ಗೂಢಚಾರಿಕೆ ನಡೆಸಿದ ಆರೋಪದಡಿ ದಾವೆ ಹೂಡಿದ್ದಾರೆ.

ಅಮೆರಿಕದ ಕೇಂದ್ರೀಯ ಗುಪ್ತಚರ ಏಜೆನ್ಸಿ ಮಾತ್ರವಲ್ಲದೇ, ಅದರ ಮಾಜಿ ಮುಖ್ಯಸ್ಥ ಮೈಕ್ ಪೋಂಪಿಯೋ ವಿರುದ್ಧವೂ ಪ್ರಕರಣ ದಾಖಲಾಗಿದೆ.

ತಮ್ಮ ಸಂವಹನಗಳನ್ನು ಸಿಐಎ ಅಕ್ರಮವಾಗಿ ದಾಖಲು ಮಾಡಿಕೊಂಡಿದೆ ಹಾಗೂ ಫೋನ್ ಮತ್ತು ಕಂಪ್ಯೂಟರ್ ಗಳ ಮೂಲಕ ಡೇಟಾ ನಕಲು ಮಾಡುತ್ತಿದ್ದರು ಎಂದು ವಕೀಲರು ಆರೋಪಿಸಿದ್ದಾರೆ.

ಈ ವಕೀಲರೊಂದಿಗೆ ಇನ್ನೂ ಇಬ್ಬರು ಪತ್ರಕರ್ತರೂ ಜೊತೆ ಸೇರಿದ್ದು, ಅಮೇರಿಕಾದವರೇ ಆದ ಇವರು ಸಿಐಎ ತಮಗೆ ಆಸ್ಟ್ರೇಲಿಯಾದವರಾದ ಅಸ್ಸಾಂಜೆ ಅವರೊಂದಿಗೆ ಗೌಪ್ಯ ಚರ್ಚೆ ನಡೆಸಲು ಅಮೆರಿಕ ಸಂವಿಧಾನ ನೀಡಿದ್ದ ರಕ್ಷಣೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಐಎ ಲಂಡನ್ ನ ಎಂಬೆಸಿಯಿಂದ ಗುತ್ತಿಗೆ ಪಡೆದಿದ್ದ ಭದ್ರತಾ ಸಂಸ್ಥೆಯೊಂದಿಗೆ ವಿಕೀಲಿಕ್ಸ್ ಸಂಸ್ಥಾಪಕನ ವಿರುದ್ಧ ಗೂಢಚಾರಿಕೆ ನಡೆಸುವುದಕ್ಕಾಗಿ ಕೆಲಸ ಮಾಡಿತ್ತು ಎಂದು ವಕೀಲರು ಹೇಳಿದ್ದಾರೆ.

ಅಫ್ಘಾನಿಸ್ಥಾನ ಹಾಗೂ ಇರಾಕ್ ಯುದ್ಧದ ವಿಷಯವಾಗಿ 2010 ರಲ್ಲಿ ಅಮೇರಿಕ ಸೇನೆ ಹಾಗೂ ರಾಜತಾಂತ್ರಿಕತೆಗೆ ಸಂಬಂಧಿಸಿದ ಮಹತ್ವದ, ತೆರೆ ಹಿಂದಿನ ಸಂಗತಿಗಳನ್ನು ಪ್ರಕಟಿಸಿ ವಿಕೀಲಿಕ್ಸ್ ಸಂಚಲನ ಮೂಡಿಸಿತ್ತು. ಈ ಬಳಿಕ ಅಸ್ಸಾಂಜೆ ಅವರನ್ನು ಬ್ರಿಟನ್ ನಿಂದ ಅಮೇರಿಕಾಗೆ ಗಡಿಪಾರು ಮಾಡಲಾಗಿತ್ತು.

ಅಸ್ಸಾಂಜೆ ಅವರ ವಕೀಲರ ಮೇಲೆ ಗೂಢಚಾರಿಕೆ ನಡೆದಿದೆ ಎಂದರೆ ಅಸ್ಸಾಂಜೆ ಅವರಿಗೆ ನ್ಯಾಯಯುತ ವಿಚಾರಣೆಯ ಹಕ್ಕನ್ನು ಕಸಿಯಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.
 

SCROLL FOR NEXT