ವಿದೇಶ

ಅಫ್ಘಾನಿಸ್ತಾನ: ಮಜರ್-ಇ-ಶರೀಫ್‌ನಲ್ಲಿ ರಸ್ತೆಬದಿ ಬಾಂಬ್ ಸ್ಫೋಟ; ಹೊತ್ತಿ ಉರಿದ ಬಸ್, ಏಳು ಮಂದಿ ಸಾವು

Ramyashree GN

ಮಜರ್-ಇ-ಶರೀಫ್: ಉತ್ತರ ಅಫ್ಘಾನಿಸ್ತಾನದಲ್ಲಿ ಮಂಗಳವಾರ ರಸ್ತೆಬದಿಯ ಬಾಂಬ್ ಸ್ಫೋಟದಲ್ಲಿ ಬಸ್‌ನಲ್ಲಿದ್ದ ಏಳು ಪೆಟ್ರೋಲಿಯಂ ಕಂಪನಿಯೊಂದರ ಉದ್ಯೋಗಿಗಳು ಸಾವಿಗೀಡಾಗಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

'ಬಾಂಬ್ ಅನ್ನು ರಸ್ತೆಬದಿಯ ಕಾರ್ಟ್‌ನಲ್ಲಿ ಇರಿಸಲಾಗಿತ್ತು. ಬಸ್ ಅಲ್ಲಿಗೆ ಬರುತ್ತಿದ್ದಂತೆ ಅದನ್ನು ಸ್ಫೋಟಿಸಲಾಗಿದೆ. ಸ್ಫೋಟದಿಂದಾಗಿ ಬಸ್ ಹೊತ್ತಿ ಉರಿದಿದೆ' ಎಂದು ಮಜಾರ್-ಇ-ಶರೀಫ್‌ನಲ್ಲಿರುವ ಬಾಲ್ಖ್ ಪೊಲೀಸ್ ಇಲಾಖೆಯ ಆಸಿಫ್ ವಜಿರಿ ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತೆ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ದೇಶದಾದ್ಯಂತ ಭದ್ರತೆಯನ್ನು ಸುಧಾರಿಸಲಾಗಿದೆ ಎಂದು ಹೇಳಿಕೊಂಡರೂ, ಹಲವಾರು ಬಾಂಬ್ ಸ್ಫೋಟಗಳು ಮತ್ತು ದಾಳಿಗಳು ನಡೆದಿವೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನ ಸ್ಥಳೀಯ ಸಂಘಟನೆಯು ಹೊತ್ತಿದೆ.

ಈ ತಿಂಗಳ ಆರಂಭದಲ್ಲಿ ಮಜರ್-ಇ-ಶರೀಫ್‌ನ ಆಗ್ನೇಯದಲ್ಲಿರುವ ಅಯ್ಬಕ್‌ನಲ್ಲಿರುವ ಮದರಸಾದಲ್ಲಿ ನಡೆದ ಸ್ಫೋಟದಿಂದ ಕನಿಷ್ಠ 19 ಜನರು ಮೃತಪಟ್ಟಿದ್ದರು ಮತ್ತು 24 ಮಂದಿ ಗಾಯಗೊಂಡಿದ್ದರು.

ನಗರದ ಸಯ್ಯದ್ ಅಬಾದ್ ಚೌಕದ ಬಳಿ ಮಂಗಳವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 7 ಗಂಟೆ ಸುಮಾರಿಗೆ ಸಂಭವಿಸಿದೆ. ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವಜೀರಿ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ವಿವರಗಳು ತಕ್ಷಣವೇ ಲಭ್ಯವಿಲ್ಲ ಮತ್ತು ಈ ದಾಳಿಯ ಹೊಣೆಯನ್ನು ಇನ್ನೂ ಯಾರೊಬ್ಬರೂ ಹೊತ್ತುಕೊಂಡಿಲ್ಲ.

SCROLL FOR NEXT