ವಿದೇಶ

ಕದಡಿದ ಪ್ಯಾರಿಸ್: ಕುರ್ದಿಗಳ ಮೇಲಿನ ದಾಳಿ ಬೆನ್ನಲ್ಲೇ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ 

Srinivas Rao BV

ಪ್ಯಾರಿಸ್: ಪ್ಯಾರಿಸ್ ನಲ್ಲಿ ಜನಾಂಗೀಯ ದಾಳಿ ನಡೆದಿದ್ದು,  ಕುರ್ದಿಗಳ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದೆ. ಡಿ.23 ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.

ಹಿಂಸಾಚಾರದಲ್ಲಿ ಕಾರುಗಳು ಬೆಂಕಿಗೆ ಆಹುತಿಯಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.ರಿಪಬ್ಲಿಕ್ ಸ್ವ್ಕೇರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಾಕಲಾಗಿದ್ದು, ಮಳಿಗೆಗಳ ಕಿಟಕಿಗಳನ್ನು ಹಾನಿಗೀಡುಮಾಡಲಾಗಿದೆ. ಹಿಂಸಾಚಾರದ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ.

ಕುರ್ದಿಗಳ ಮೂವರು ಕಾರ್ಯಕರ್ತರ ಹತ್ಯೆ ಪ್ರಕರಣ ಇತ್ಯರ್ಥವಾಗದೇ 10 ವರ್ಷಗಳಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದನ್ನು ಸಮುದಾಯ ಪ್ಯಾರಿಸ್ ನಲ್ಲಿ ಹಮ್ಮಿಕೊಳ್ಳುವ ತಯಾರಿಯಲ್ಲಿದ್ದಾಗ ಕುರ್ದಿಗಳ ಸಾಂಸ್ಕೃತಿಕ ಕೇಂದ್ರದ ಮೇಲೆ ಗನ್ ಮ್ಯಾನ್ ಓರ್ವ ಶುಕ್ರವಾರದಂದು ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಮೂವರು ಕುರ್ದಿಗಳು ಮೃತಪಟ್ಟಿದ್ದು, ಶಂಕಿತನನ್ನು ಶೀಘ್ರವೇ ಬಂಧಿಸಲಾಗಿತ್ತು.

ಬಂಧಿತ ವ್ಯಕ್ತಿ ತನ್ನನ್ನು ತಾನು ಜನಾಂಗೀಯ ದ್ವೇಷಿ ಹಾಗೂ ವಿದೇಶಿಗರನ್ನು ದ್ವೇಷಿಸುವವ ಎಂದು ಹೇಳಿಕೊಂಡಿದ್ದು, ಆರೋಗ್ಯದ ಕಾರಣದಿಂದಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳಿಯ ಪೊಲೀಸರು ಹೇಳಿದ್ದಾರೆ. ಈ ಘಟನೆಯ ಬೆನ್ನಲ್ಲೇ ಪ್ಯಾರಿಸ್ ನಲ್ಲಿ ಶಾಂತಿ ಕದಡಿದೆ.

SCROLL FOR NEXT