ವಿದೇಶ

ವಿಶ್ವಸಂಸ್ಥೆ ಮುಖ್ಯಸ್ಥರ ತಂತ್ರಜ್ಞಾನ ರಾಯಭಾರಿಯಾಗಿ ಭಾರತದ ಅಮನ್ ದೀಪ್ ಸಿಂಗ್ ಗಿಲ್ ನೇಮಕ

Nagaraja AB

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ತಂತ್ರಜ್ಞಾನದ ರಾಯಭಾರಿಯಾಗಿ ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. 

ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಗತಿ ಮತ್ತು ಪರಿಣಾಮಕಾರಿ ಡಿಜಿಟಲ್ ತಂತ್ರಜ್ಞಾನ ಕುರಿತ ಜ್ಞಾನಕ್ಕಾಗಿ ಅವರನ್ನು 'ಡಿಜಿಟಲ್ ತಂತ್ರಜ್ಞಾನ ಕುರಿತ ಚಿಂತನೆಯ ನಾಯಕ' ಎಂದು ವಿಶ್ವಸಂಸ್ಥೆ ಬಣ್ಣಿಸಿದೆ. ಭಾರತದ ರಾಯಭಾರಿಯಾಗಿದ್ದ ಗಿಲ್,   2016 ರಿಂದ 2018ರವರೆಗೆ ಜಿನಿವಾದಲ್ಲಿನ ನಿಶಸ್ತ್ರೀಕರಣ ಸಮ್ಮೇಳನದ ಶಾಶ್ವತ ಪ್ರತಿನಿಧಿಯಾಗಿದ್ದರು. 

2018-2019ರಲ್ಲಿ ಡಿಜಿಟಲ್ ಸಹಕಾರ ಕುರಿತ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ಉನ್ನತ ಮಟ್ಟದ ಸಮಿತಿಯ ಕಾರ್ಯಕಾರಿ ನಿರ್ದೇಶಕರಾಗಿಯೂ ಗಿಲ್ ಕೆಲಸ ಮಾಡಿದ್ದಾರೆ. 

1992ರಲ್ಲಿ ಭಾರತದ ರಾಯಭಾರಿಯಾಗಿ ಸೇವೆಗೆ ಸೇರಿದ ಗಿಲ್, ತೆಹ್ರನ್ ಮತ್ತು ಕೊಲೊಂಬೊದಲ್ಲಿ ರಾಯಭಾರಿಯಾಗಿ ನಿಯೋಜನೆಯೊಂದಿಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಸ್ಟಾನ್ ಫೋರ್ಡ್ ವಿವಿಯ ಅತಿಥಿ ಸ್ಕಾಲರ್ ಆಗಿದ್ದರು. 

ಪಂಜಾಬ್ ವಿವಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರೀಕಲ್ ಕಮ್ಯೂನಿಕೇಷನ್ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಗಿಲ್, ಲಂಡನ್ ನ ಕಿಂಗ್ಸ್ ಕಾಲೇಜಿನಿಂದ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ಜಿನಿವಾ ವಿವಿಯಿಂದ ಫ್ರೆಂಚ್ ಇತಿಹಾಸ ಮತ್ತು ಭಾಷೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. 

SCROLL FOR NEXT