ವಿದೇಶ

ಸಿಂಗಾಪುರ: 64 ವರ್ಷದ ಭಾರತ ಮೂಲದ ಮಹಿಳೆಯಿಂದ ಕೆಲಸದಾಕೆ ಮೇಲೆ ಮಾರಣಾಂತಿಕ ಹಲ್ಲೆ, ತಪ್ಪೊಪ್ಪಿಗೆ

Srinivasamurthy VN

ಸಿಂಗಾಪುರ: ಸಿಂಗಪುರದಲ್ಲಿ 64 ವರ್ಷದ ಭಾರತ ಮೂಲದ ಮಹಿಳೆ ಕೆಲಸದಾಕೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಪ್ಪೊಪ್ಪಿಕ್ಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿಂಗಪುರದಲ್ಲಿ ಮಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನ್ಮಾರ್‌ನ ಪಿಯಾಂಗ್ ನೈಯ್ ಡಾನ್‌ ಎಂಬಾಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ 64 ವರ್ಷದ ಭಾರತೀಯ ಮೂಲದ ಪ್ರೇಮಾ ಎಸ್‌. ನಾರಾಯಣಸ್ವಾಮಿ ಸೋಮವಾರ ತಪ್ಪೊಪ್ಪಿಕೊಂಡಿದ್ದಾರೆ. ಪ್ರೇಮಾ ಅವರ ಮಗಳು ಗಾಯತ್ರಿ ಮುರುಗಯ್ಯನ್‌ ಪೊಲೀಸ್ ಅಧಿಕಾರಿಯ ಪತ್ನಿಯಾಗಿದ್ದಾರೆ. ಕೆಲಸದಾಕೆಯ ಮೇಲೆ ಗಾಯತ್ರಿ ಹಲ್ಲೆ ನಡೆಸುತ್ತಿರುವುದು ತಿಳಿದ ಮೇಲೆ ಪ್ರೇಮಾ ಕೂಡ ಕೆಲಸದಾಕೆಗೆ ಹೊಡೆದು, ಹಿಂಸೆ ನೀಡಿದ್ದಾರೆ. ಪ್ರೇಮಾ, ಆಕೆಯ ಮೇಲೆ ನೀರು ಸುರಿದು, ಒದ್ದು, ಕೈಯಿಂದ ಗುದ್ದಿದ್ದಾರೆ. ಅಲ್ಲದೆ ಕಪಾಳಮೋಕ್ಷ ಮಾಡಿದ್ದು, ಹಸಿವಿನಿಂದ ಬಳಲು ಬಿಟ್ಟಿದ್ದಾರೆ. ಕತ್ತು ಹಿಡಿದು ಎಳೆದಾಡಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

24 ವರ್ಷದ ನೈಯ್ ಡಾನ್ ಅವರು 14 ತಿಂಗಳಿಂದ ನಿರಂತರವಾಗಿ ಹಲ್ಲೆಗೆ ಒಳಗಾಗಿ 2016ರ ಜು.26ರಂದು ಕುತ್ತಿಗೆ ಹಾಗೂ ಮೆದುಳಿಗೆ ತೀವ್ರವಾದ ಗಾಯದಿಂದಾಗಿ ಮೃತರಾಗಿದ್ದರು. ಈ ಸಂಬಂಧ ಪ್ರೇಮಾ ಅವರ ಮಗಳು ಗಾಯತ್ರಿ ಮುರುಗಯ್ಯನ್‌ ಅವರಿಗೆ 2021ರಲ್ಲಿ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರೇಮಾ ಕೂಡ ತಪ್ಪೊಪ್ಪಿಕೊಂಡಿದ್ದು ಅವರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 2,95,898 (5,000 ಎಸ್‌ಜಿಡಿ) ದಂಡ ವಿಧಿಸಬಹುದು ಎನ್ನಲಾಗಿದೆ.

ಮೇ 2015 ರಲ್ಲಿ ಕುಟುಂಬಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ 39 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದ್ದ ಕೆಲಸದಾಕೆ ಸಾಯುವಾಗ ಕೇವಲ 24 ಕಿಲೋಗ್ರಾಂಗಳಷ್ಟು ತೂಕವಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

SCROLL FOR NEXT