ವಿದೇಶ

ಚೀನಾದ ಕಾರ್ಖಾನೆಯಲ್ಲಿ ಬೆಂಕಿ ಆಕಸ್ಮಿಕ: 36 ಮಂದಿ ಸಾವು, ಇಬ್ಬರು ನಾಪತ್ತೆ

Ramyashree GN

ಬೀಜಿಂಗ್: ಮಧ್ಯ ಚೀನಾದ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 36 ಜನರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ನಗರದ ಪ್ರಚಾರ ವಿಭಾಗದ ಪ್ರಕಾರ, ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದ ವೆನ್‌ಫೆಂಗ್ ಜಿಲ್ಲೆಯ ವಾಣಿಜ್ಯ ಮತ್ತು ವ್ಯಾಪಾರ ಕಂಪನಿಯ ಘಟಕವೊಂದರಲ್ಲಿ ಸೋಮವಾರ ಸಂಭವಿಸಿದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ಕೆಲಸ ಮಾಡಿದರು.

ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆಗಾಗಿ ಪೊಲೀಸರು ಕೆಲವು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

2015ರ ಆಗಸ್ಟ್‌ನಲ್ಲಿ, ಸುಮಾರು 700 ಟನ್ ಸೋಡಿಯಂ ಸೈನೈಡ್ ಸೇರಿದಂತೆ ದೊಡ್ಡ ಪ್ರಮಾಣದ ವಿಷಕಾರಿ ರಾಸಾಯನಿಕಗಳನ್ನು ಸಂಗ್ರಹಿಸಲಾಗಿದ್ದ ಟಿಯಾಂಜಿನ್ ಬಂದರಿನ ಗೋದಾಮಿನಲ್ಲಿ ನಡೆದ ಸ್ಫೋಟಗಳಿಂದ 170ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು 700 ಜನರು ಗಾಯಗೊಂಡಿದ್ದರು.

ಚೀನಾ ಆಗಾಗ್ಗೆ ಮಾರಣಾಂತಿಕ ಬೆಂಕಿ ಅವಘಡ ಮತ್ತು ಕೈಗಾರಿಕಾ ಅಪಘಾತಗಳಿಗೆ ಗುರಿಯಾಗುತ್ತದೆ. ನಿರ್ಲಕ್ಷ್ಯದಿಂದಲೇ ಇಂತಹ ಅವಘಡಗಳು ಸಂಭವಿಸುತ್ತವೆ ಎಂದು ಆರೋಪಿಸಲಾಗುತ್ತದೆ.

SCROLL FOR NEXT