ವಿದೇಶ

ಪಾಕಿಸ್ತಾನ: ತಾಲಿಬಾನ್ ನಿಂದ ಆತ್ಮಾಹುತಿ ಬಾಂಬ್ ದಾಳಿ, ಮೂವರು ಸಾವು, 23 ಮಂದಿಗೆ ಗಾಯ

Lingaraj Badiger

ಕ್ವೆಟ್ಟಾ: ಪಶ್ಚಿಮ ಪಾಕಿಸ್ತಾನದಲ್ಲಿ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಬುಧವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ. ತಾಲಿಬಾನ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಬಲೂಚಿಸ್ತಾನ ಬಳಿಯ ಕ್ವೆಟ್ಟಾದ ಬಲೇಲಿ ಪ್ರದೇಶದಲ್ಲಿ ಪೊಲೀಸ್ ಟ್ರಕ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್, ಮಹಿಳೆ ಮತ್ತು ಮಗು ಮೃತಪಟ್ಟಿದ್ದು, 20 ಪೊಲೀಸ್ ಅಧಿಕಾರಿಗಳು ಸೇರಿದಂತೆ 23 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜರ್ ಮೆಹೆಸರ್ ಅವರು ತಿಳಿಸಿದ್ದಾರೆ.

ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ದಾಳಿಯ ಹೊಣೆ ಹೊತ್ತುಕೊಂಡಿದ್ದು, ಒಂದು ದಿನದ ಹಿಂದೆಯಷ್ಟೇ ಉಗ್ರಗಾಮಿ ಗುಂಪು ಸರ್ಕಾರದೊಂದಿಗೆ ತನ್ನ ಕದನ ವಿರಾಮವನ್ನು ಹಿಂತೆಗೆದುಕೊಂಡಿತ್ತು. ಬಳಿಕ ದೇಶಾದ್ಯಂತ ದಾಳಿಗಳನ್ನು ನಡೆಸುವಂತೆ ತನ್ನ ಸೈನಿಕರಿಗೆ ತಿಳಿಸಿರುವುದಾಗಿ ವರದಿಯಾಗಿದೆ. 

ಕದನ ವಿರಾಮದ ಸಮಯದಲ್ಲಿ ಸಂಸ್ಥಾಪಕ ಸದಸ್ಯ ಉಮರ್ ಖಾಲಿದ್ ಖುರಾಸಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಕಸ್ಟಮ್ಸ್ ಪೋಸ್ಟ್ ಬಳಿ ತಮ್ಮ "ಪವಿತ್ರ ಯೋಧ" ಕಾರ್ ಬಾಂಬ್ ಸ್ಫೋಟಿಸಿರುವುದಾಗಿ ಎಂದು ಟಿಟಿಪಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ "ತಮ್ಮ ಸೇಡಿನ ಕಾರ್ಯಾಚರಣೆಗಳು ಮುಂದುವರೆಯುತ್ತವೆ" ಎಂದು ಹೇಳಿದೆ.

SCROLL FOR NEXT