ಕೀವ್: ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದಾಳಿ ಮಾಡಲು ರಷ್ಯಾ ಕಾಮಿಕೇಜ್ ಡ್ರೋನ್‌ಗಳನ್ನು ಬಳಸಿದೆ ಎಂದು ಉಕ್ರೇನ್‌ನ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ರಷ್ಯಾ ಇತ್ತೀಚೆಗೆ ರಾಜಧಾನಿ ಕೀವ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಲೇ ಇದೆ.
ಸೋಮವಾರ ಬೆಳಿಗ್ಗೆ ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಸಿಬ್ಬಂದಿ ಮುಖ್ಯಸ್ಥ ಆಂಡ್ರಿ ಯೆರ್ಮಾಕ್, 'ರಾಜಧಾನಿ ಕೀವ್ ಮೇಲೆ ಕಾಮಿಕೇಜ್ ಡ್ರೋನ್‌ಗಳಿಂದ ದಾಳಿ ಮಾಡಲಾಗಿದೆ. ಈ ರೀತಿಯ ದಾಳಿಯಿಂದ ಅವರಿಗೆ ಸಹಾಯವಾಗುತ್ತದೆ ಎಂದು ರಷ್ಯನ್ನರು ಭಾವಿಸುತ್ತಾರೆ, ಆದರೆ ಅಂತಹ ಕ್ರಮಗಳು ನಮಗೆ ಸಂಕಟ ಉಂಟುಮಾಡುತ್ತಿವೆ' ಎಂದಿದ್ದಾರೆ.
'ನಮಗೆ ಹೆಚ್ಚಿನ ವಾಯು ರಕ್ಷಣಾ ವ್ಯವಸ್ಥೆಗಳು ಶೀಘ್ರವಾಗಿ ಅಗತ್ಯವಿದೆ. ವಾಯು ಮಾರ್ಗದಲ್ಲಿ ಶತ್ರು ದೇಶ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಶತ್ರುಗಳ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ನಾವು ವಾಯು ಮಾರ್ಗದಲ್ಲೇ ಹೊಡೆದುರುಳಿಸಲು ಹೆಚ್ಚಿನ ಶಸ್ತ್ರಾಸ್ತ್ರಗಳು ಬೇಕಿದೆ' ಎಂದಿದ್ದಾರೆ.
ಅಡ್ಡಾಡುವ ಯುದ್ಧಸಾಮಗ್ರಿಗಳೆಂದೇ ಕರೆಯಲ್ಪಡುವ ಕಾಮಿಕೇಜ್ ಡ್ರೋನ್‌ಗಳು ಸಣ್ಣ ವೈಮಾನಿಕ ಶಸ್ತ್ರಾಸ್ತ್ರಗಳಾಗಿದ್ದು, ತಮ್ಮ ಗುರಿ ಮೇಲೆ ದಾಳಿ ಮಾಡಿದ ಬಳಿಕ ನಾಶವಾಗುತ್ತವೆ. ಕ್ಷಿಪಣಿಗಳನ್ನು ಬೀಳಿಸಿದ ನಂತರ ಹಿಂತಿರುಗಬೇಕಾದ ಇತರ ಡ್ರೋನ್‌ಗಳಿಗಿಂತ ಭಿನ್ನವಾಗಿ, ಕಾಮಿಕಾಜಿ ಡ್ರೋನ್‌ಗಳನ್ನು ದಾಳಿ ನಡೆಸಿದ ಬಳಿಕ ಬಿಸಾಡಬಹುದು.
ಈ ಡ್ರೋನ್‌ಗಳಿಗೆ ಎರಡನೇ ಮಹಾಯುದ್ಧದಲ್ಲಿ ಆತ್ಮಹತ್ಯಾ ಕಾರ್ಯಾಚರಣೆಗಳಲ್ಲಿ ತಮ್ಮ ವಿಮಾನಗಳನ್ನು ಕ್ರ್ಯಾಶ್ ಮಾಡಲು ಸ್ವಯಂಪ್ರೇರಿತ ಜಪಾನಿನ ಪೈಲಟ್‌ಗಳಿಂದ ಈ ಹೆಸರು ಬಂದಿದೆ.
ಉಕ್ರೇನ್‌ನ ಸ್ಥಳೀಯ ಕಾಲಮಾನ ಬೆಳಿಗ್ಗೆ 6.30 ರಿಂದ 8.10 ರವರೆಗೆ ಸಂಭವಿಸಿದ ಡ್ರೋನ್ ದಾಳಿಯನ್ನು ದೃಢೀಕರಿಸಿದ ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಅವರು, ಅನಗತ್ಯವಾಗಿ ನಗರದ ಕೇಂದ್ರಕ್ಕೆ ತೆರಳದಂತೆ ರಾಜಧಾನಿಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾರಣಾಂತಿಕ ದಾಳಿ; ಭಯೋತ್ಪಾದನಾ ಕೃತ್ಯಕ್ಕೆ ಪ್ರತಿಕ್ರಿಯೆ ಎಂದ ವ್ಲಾಡಿಮಿರ್ ಪುಟಿನ್
ಸರಣಿ ಟ್ವೀಟ್‌ಗಳಲ್ಲಿ, ಡ್ರೋನ್ ದಾಳಿಯಿಂದಾಗಿ ಶೆವ್ಚೆಂಕೊ ಜಿಲ್ಲೆಯ ವಸತಿ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದು, ಮಹಿಳೆಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 18 ಜನರನ್ನು ರಕ್ಷಿಸಲಾಗಿದೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.
ಡ್ರೋನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್ ವಾಯು ಪಕ್ಷಣಾ ಪಡೆ
ಉಕ್ರೇನ್ ವಾಯು ರಕ್ಷಣಾ ಪಡೆ ರಾತ್ರೋರಾತ್ರಿ 26 ಶಾಹೆದ್ ಮತ್ತು 136 ಕಾಮಿಕೇಜ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಪ್ರಕಾರ, ಉಕ್ರೇನ್‌ನ ವಾಯು ರಕ್ಷಣಾ ಪಡೆಯು 26 ಇರಾನ್ ನಿರ್ಮಿತ ಶಾಹೆದ್ ಮತ್ತು 136 ಕಾಮಿಕೇಜ್ ಡ್ರೋನ್‌ಗಳನ್ನು ಅಕ್ಟೋಬರ್ 16 ರಂದು ರಾತ್ರಿಯಿಡೀ ಉಡಾಯಿಸಿದೆ ಎಂದು ತಿಳಿಸಿದ್ದಾರೆ.
ದಾಳಿ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಕಾಮಿಕೇಜ್ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಉಕ್ರೇನ್ ಮೇಲೆ ದಾಳಿ ಮಾಡುತ್ತಿವೆ. ದಾಳಿಯಿಂದ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಶತ್ರುಗಳು ನಮ್ಮ ನಗರಗಳ ಮೇಲೆ ದಾಳಿ ಮಾಡಬಹುದು. ಆದರೆ, ಅದರಿಂದ ಕುಂದಿಸಲು ಸಾಧ್ಯವಿಲ್ಲ. ಆಕ್ರಮಣಾಕಾರರಿಗೆ ಮುಂದಿನ ಪೀಳಿಗೆಯಿಂದ ನ್ಯಾಯಯುತ ಶಿಕ್ಷೆ ಮತ್ತು ಖಂಡನೆ ಮಾತ್ರ ಸಿಗುತ್ತದೆ. ನಾವು ವಿಜಯವನ್ನು ಸಾಧಿಸುತ್ತೇವೆ' ಎಂದಿದ್ದಾರೆ.
ಕಳೆದ ವಾರ, ರಷ್ಯಾ ಕೀವ್ ಸೇರಿದಂತೆ ಉಕ್ರೇನ್ ನಗರಗಳ ಮೇಲೆ ಕನಿಷ್ಠ 83 ಕ್ಷಿಪಣಿಗಳೊಂದಿಗೆ ದಾಳಿ ಮಾಡಿದ್ದು, ಇದರಿಂದ ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ. ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಂಡಿದೆ.
ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದ ನಂತರ ಕೀವ್‌ನ ಕೇಂದ್ರವನ್ನು ನೇರವಾಗಿ ಗುರಿಯಾಗಿಸಿಕೊಂಡಿರುವುದು ಇದೇ ಮೊದಲು. ರಷ್ಯಾಗೆ ಸಂಪರ್ಕ ಕಲ್ಪಿಸುವ ಕ್ರಿಮಿಯಾದಲ್ಲಿನ ಪ್ರಮುಖ ಸೇತುವೆಯನ್ನು ಸ್ಫೋಟಿಸಿದ್ದಕ್ಕೆ ಪ್ರತಿಕಾರವಾಗಿ ರಷ್ಯಾದ ದಾಳಿಗಳು ನಡೆಯುತ್ತಿವೆ.