ವಿದೇಶ

ಬ್ರಿಟನ್ ನ ಮೊದಲ ಹಿಂದೂ ಪ್ರಧಾನಿ ರಿಷಿ ಸುನಕ್ ಗೆ ಭಾರತದೊಂದಿಗೆ ಇರುವ ನಂಟೇನು!

Nagaraja AB

ಲಂಡನ್: ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.

ಲಿಜ್ ಟ್ರಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುನಕ್ ಅದೃಷ್ಟ ಖುಲಾಯಿಸಿತು. 45 ದಿನಗಳ ಆಳ್ವಿಕೆ ನಂತರ ಲಿಜ್ ಟ್ರಸ್ ಗುರುವಾರ ರಾಜೀನಾಮೆ ನೀಡಿದ ನಂತರ ರಿಷಿ ಸುನಕ್ ಮತ್ತು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್  ಯುಕೆ ಪ್ರಧಾನಿ ರೇಸ್ ನಲ್ಲಿದ್ದರು. ಆದರೆ, ಅಗತ್ಯ ಬೆಂಬಲ ಹೊಂದಿದ್ದರು ಕೂಡಾ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆ ರೇಸ್ ನಿಂದ ಹಿಂದೆ ಸರಿದಿದ್ದರಿಂದ ಸುನಕ್ ಹಾದಿ ಸುಗಮವಾಯಿತು.

ಸುನಕ್ ಪೋಷಕರು ಪೂರ್ವ ಆಫ್ರಿಕಾದಿಂದ ಬ್ರಿಟನ್ ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಸುನಕ್ ಪೂರ್ವಿಕರು ಬ್ರಿಟಿಷ್ ಭಾರತದಿಂದ ಬಂದವರು, ಆದರೆ, ಅವರ ಜನ್ಮಸ್ಥಳ ಗುಜ್ರಾನ್ವಾಲಾ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಸೌತಾಂಪ್ಟನ್ ಸುನಕ್ ಹುಟ್ಟಿದ ಸ್ಥಳವಾಗಿದೆ. ಆಕ್ಸ್ ಫರ್ಡ್ ಮತ್ತು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಸುನಕ್, ಕರ್ನಾಟಕದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ- ಸುಧಾ ನಾರಾಯಣಮೂರ್ತಿ  ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು 2009ರಲ್ಲಿ ವಿವಾಹವಾಗಿದ್ದಾರೆ. 

ಏಪ್ರಿಲ್ ನಲ್ಲಿ ಅಕ್ಷತಾ ನಾರಾಯಣ ಮೂರ್ತಿ ವಿರುದ್ದ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಆದರೆ, ಆಕೆ ಎಲ್ಲಾ ತೆರಿಗೆಗಳನ್ನು ಪಾವತಿಸಿರುವುದಾಗಿ ಸುನಕ್ ಸಮರ್ಥಿಸಿಕೊಂಡಿದ್ದರು.

SCROLL FOR NEXT