ವಿದೇಶ

ಇಂಗ್ಲೆಂಡ್ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ: ತಮ್ಮ ಮೊದಲ ಭಾಷಣದಲ್ಲಿ ಸುನಕ್ ಹೇಳಿದ್ದಿಷ್ಟು!

Vishwanath S

ಲಂಡನ್: 'ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದು ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾರೆ.

ರಿಷಿ ಸುನಕ್ ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದರು. ಬಳಿಕ ಬ್ರಿಟನ್ ಪ್ರಧಾನಿಯಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಿದರು. ರಿಷಿ ಸುನಕ್ ಬ್ರಿಟನ್ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿದ್ದಾರೆ.

ಬ್ರಿಟನ್‌ನ ಪ್ರಧಾನಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ರಿಷಿ ಸುನಕ್, ' ದೇಶವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಈ ಕ್ಷಣದಿಂದಲೇ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

'ಪ್ರಸ್ತುತ ನಮ್ಮ ದೇಶವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್‌ನಲ್ಲಿನ ಪುಟಿನ್ ಯುದ್ಧವು ಪ್ರಪಂಚದಾದ್ಯಂತದ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದೆ. ಮಾಜಿ ಪ್ರಧಾನಿ ಲಿಜ್ ಟ್ರಸ್ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ಕೆಲ ಕಠಿಣ ನಿರ್ಣಯಗಳನ್ನು ಕೈಗೊಂಡರು. ನಾನು ಅವರನ್ನು ಮೆಚ್ಚುತ್ತೇನೆ. ಆದರೆ ಉದ್ದೇಶಪೂರ್ವಕವಲ್ಲದ ಕೆಲವು ತಪ್ಪುಗಳು ಆಗಿವೆ. ವಾಸ್ತವವಾಗಿ ಆ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದರು.

ಇದಕ್ಕೂ ಮುನ್ನ ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರು ಡೌನಿಂಗ್ ಸ್ಟ್ರೀಟ್‌ನಿಂದ ವಿದಾಯ ಭಾಷಣ ಮಾಡಿದರು. ನೂತನ ಪ್ರಧಾನಿಯ ಯಶಸ್ಸಿಗೆ ಹಾರೈಸಿದರು. ಅದೇ ಸಮಯದಲ್ಲಿ, ಅವರು ಅಧಿಕಾರದಲ್ಲಿದ್ದ ಸಮಯದಲ್ಲಿನ ಕೆಲವು ಸಾಧನೆಗಳ ಬಗ್ಗೆ ತಿಳಿಸಿದರು.

SCROLL FOR NEXT