ವಿದೇಶ

ಉಗಾಂಡ: ಅಂಧರ ಶಾಲೆಯಲ್ಲಿ ಬೆಂಕಿ ಅವಘಡ, 11 ಬಾಲಕಿಯರು ಸಾವು

Ramyashree GN

ಮುಕೊನೊ: ಉಗಾಂಡಾದ ರಾಜಧಾನಿ ಕಂಪಾಲದ ಹೊರಗಿನ ಅಂಧ ವಿದ್ಯಾರ್ಥಿಗಳ ಬೋರ್ಡಿಂಗ್ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡು ಗ್ರಾಮೀಣ ಸಮುದಾಯದ 11 ಮಕ್ಕಳು ಮೃತಪಟ್ಟಿದ್ದಾರೆ ಎಂದು ಶಾಲೆಯ ಆಡಳಿತಾಧಿಕಾರಿ ಮತ್ತು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

'ಮಧ್ಯರಾತ್ರಿಯ ಸುಮಾರಿಗೆ ನಮ್ಮ ವಸತಿ ನಿಲಯವೊಂದು ಬೆಂಕಿಗೆ ಆಹುತಿಯಾಯಿತು. ಇದು ಯುವತಿಯರಿಗಾಗಿ ಇರುವ ವಸತಿ ನಿಲಯಗಳಲ್ಲಿ ಒಂದಾಗಿದೆ. ಇದು ಬೆಂಕಿಗೆ ಆಹುತಿಯಾಗಿದೆ ಮತ್ತು ದುರದೃಷ್ಟವಶಾತ್ 11 ಬಾಲಕಿಯರು ಮೃತಪಟ್ಟಿದ್ದಾರೆ ಎಂದು ಶಾಲೆಯ ಸಂಸ್ಥಾಪಕ ಫ್ರಾನ್ಸಿಸ್ ಕಿನುಬಿ ಹೇಳಿದರು.

ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಮುಕೊನೊ ಜಿಲ್ಲೆಯ ಸಲಾಮಾ ಅಂಧ ಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ಸಂಭವಿಸಿದ ಬೆಂಕಿಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

7 ರಿಂದ 10 ವರ್ಷದೊಳಗಿನ ಬಾಲಕಿಯರು ಸೇರಿದಂತೆ ಸಂತ್ರಸ್ತರು ಸುಟ್ಟುಕರಕಲಾಗಿದ್ದಾರೆ. ಇವರು ಯಾರೆಂದು ಗುರುತಿಸಲು ಸಾಧ್ಯವಿಲ್ಲ. ಡಿಎನ್‌ಎ ವಿಶ್ಲೇಷಣೆಯ ಮೂಲಕ ಸಂತ್ರಸ್ತರ ಮೃತದೇಹಗಳನ್ನು ಗುರುತಿಸಲಾಗುವುದು ಎಂದು ಮುಕೊನೊದಲ್ಲಿನ ಉನ್ನತ ಅಧಿಕಾರಿ ಫಾತುಮಾ ಎನ್ಡಿಸಾಬಾ ಸ್ಥಳೀಯ ಪ್ರಸಾರಕ NTV ಗೆ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಪೊಲೀಸರು ಸುತ್ತುವರಿದಿದ್ದು, ಸೇನಾ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ಕಂಡುಬಂದಿದೆ. ಈ ವಾರ ಪೂರ್ವ ಆಫ್ರಿಕಾದ ದೇಶದಲ್ಲಿ ನಿರೀಕ್ಷಿಸಲಾಗಿರುವ ಬ್ರಿಟನ್‌ನ ರಾಜಕುಮಾರಿ ಅನ್ನಿ ಶುಕ್ರವಾರ ಶಾಲೆಗೆ ಭೇಟಿ ನೀಡಬೇಕಿತ್ತು.

ಶಾಲೆಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿರುವುದು ಉಗಾಂಡಾದ ಶಿಕ್ಷಣ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ. ಅಲ್ಲಿ ತರಗತಿ ಕೊಠಡಿಗಳು ಮತ್ತು ವಸತಿ ನಿಲಯಗಳು ಸಾಮಾನ್ಯವಾಗಿ ಕಿಕ್ಕಿರಿದಿರುತ್ತವೆ ಮತ್ತು ಸಾಮಾನ್ಯವಾಗಿ ಆ ಸ್ಥಳದಲ್ಲಿ ಯಾವುದೇ ಬೆಂಕಿ ನಂದಿಸುವ ಉಪಕರಣಗಳಿಲ್ಲ. ಕೆಲವು ಪ್ರಕರಣಗಳಲ್ಲಿ ಕಳಪೆ ವಿದ್ಯುತ್ ಸಂಪರ್ಕವೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

SCROLL FOR NEXT