ವಿದೇಶ

ಟ್ವಿಟರ್ ಖರೀದಿ ಒಪ್ಪಂದ ಅಂತಿಮ: ಸಂಸ್ಥೆಯ ಶೇ.75ರಷ್ಟು ಸಿಬ್ಬಂದಿಗಳ ತೆಗೆಯುವುದಿಲ್ಲ ಎಂದ ಮಸ್ಕ್

Srinivasamurthy VN

ಸ್ಯಾನ್ ಫ್ರಾನ್ಸಿಸ್ಕೋ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಅನ್ನು ಖರೀದಿಸುವ ಒಪ್ಪಂದ ಅಂತಿಮವಾಗಿದ್ದು, ಸಂಸ್ಥೆಯ 75 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ಟ್ವಿಟರ್ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಮಸ್ಕ್ ಜಾಗತಿಕವಾಗಿ ಟ್ವಿಟರ್ ಸಿಬ್ಬಂದಿಯಿಂದ ಶೇಕಡಾ 75 ಅಥವಾ 5,600 ಉದ್ಯೋಗಿಗಳನ್ನು ವಜಾ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಬುಧವಾರ ತಡರಾತ್ರಿ ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಮಸ್ಕ್, ತಾನು ಹೆಚ್ಚಿನ ಸಿಬ್ಬಂದಿಗಳನ್ನು ವಜಾ ಮಾಡುವುದಿಲ್ಲ ಎಂದು ಉದ್ಯೋಗಿಗಳಿಗೆ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಅಂಕಿ-ಅಂಶಗಳನ್ನು ಹಂಚಿಕೊಳ್ಳದೆ ಟ್ವಿಟರ್ ಸಿಬ್ಬಂದಿಯನ್ನು ವಜಾಗೊಳಿಸುವ ಕುರಿತು ಮಸ್ಕ್ ತಮ್ಮ ಟ್ವೀಟ್‌ಗಳಲ್ಲಿ ಆಕಸ್ಮಿಕವಾಗಿ ಉಲ್ಲೇಖಿಸಿದ್ದರು. ಟ್ವಿಟರ್ ಸ್ವಾಧೀನದ ಭಾಗವಾಗಿ ನಿರೀಕ್ಷಿತ ಸಿಬ್ಬಂದಿ ಕಡಿತದ ಬಗ್ಗೆ ಟ್ವಿಟರ್ ಉದ್ಯೋಗಿಗಳು ಇನ್ನೂ ಆತಂಕದಲ್ಲಿದ್ದಾರೆ. ಒಮ್ಮೆ ಖರೀದಿ ಒಪ್ಪಂದ  ಅಂತಿಮ ಮುಕ್ತಾಯದ ಷರತ್ತುಗಳನ್ನು ಪೂರೈಸಿದ ನಂತರ, ಶುಕ್ರವಾರದ ಗಡುವಿನೊಳಗೆ ವಹಿವಾಟನ್ನು ಕಾರ್ಯಗತಗೊಳಿಸಲು ಮಸ್ಕ್‌ಗೆ ಹಣವನ್ನು ಲಭ್ಯಗೊಳಿಸಲಾಗುತ್ತದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಬ್ಯಾಂಕ್‌ಗಳು ಮತ್ತು ಸಾಲದಾತರು ಟ್ವಿಟರ್‌ನ $44 ಶತಕೋಟಿ ಸ್ವಾಧೀನಕ್ಕೆ ಮಸ್ಕ್‌ನ ಬೆಂಬಲದೊಂದಿಗೆ $13 ಶತಕೋಟಿ ಹಣ ವರ್ಗಾವಣೆಗೆ ಮುಂದಾಗಿದ್ದಾರೆ. ನ್ಯಾಯಾಧೀಶರು ನೀಡಿದ ಗಡುವಿನ ಪ್ರಕಾರ ಮಸ್ಕ್ ಶುಕ್ರವಾರದೊಳಗೆ ಸ್ವಾಧೀನವನ್ನು ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಡೆಲವೇರ್‌ನ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ.

ಏತನ್ಮಧ್ಯೆ, ಟ್ವಿಟರ್ ಉದ್ಯೋಗಿಗಳು ನಿರ್ದೇಶಕರ ಮಂಡಳಿ ಮತ್ತು ಮಸ್ಕ್‌ಗೆ ಮುಕ್ತ ಪತ್ರ ಬರೆದಿದ್ದು, 75 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಅವರ ಯೋಜನೆಗಳನ್ನು ಟೀಕಿಸಿದ್ದಾರೆ. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಮಸ್ಕ್, ಸಂಸ್ಥೆಯ 75 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

SCROLL FOR NEXT