ವಿದೇಶ

ಈಸ್ಟರ್ ಸಂಡೆ ದಾಳಿ: ಶ್ರೀಲಂಕಾ ಮಾಜಿ ಅಧ್ಯಕ್ಷ ಸಿರಿಸೇನಾ ಶಂಕಿತ- ನ್ಯಾಯಾಲಯ ತೀರ್ಪು

Nagaraja AB

`ಕೊಲಂಬೋ: 2019 ರ ಈಸ್ಟರ್ ಬಾಂಬ್ ಸ್ಫೋಟದಲ್ಲಿ 11 ಭಾರತೀಯರು ಸೇರಿದಂತೆ 270 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಶಂಕಿತ ಎಂದು ಶ್ರೀಲಂಕಾದ ನ್ಯಾಯಾಲವೊಂದು ಶುಕ್ರವಾರ ಹೆಸರಿಸಿದೆ.

ಶ್ರೀಲಂಕಾದ ಮಾಜಿ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ದಾಳಿಗೂ ಮುನ್ನ ಲಭ್ಯವಾಗಿದ್ದ ಬೇಹುಗಾರಿಕಾ ಮಾಹಿತಿಯನ್ನು ನಿರ್ಲಕ್ಷ್ಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅಕ್ಟೋಬರ್ 14 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಇದೀಗ ಆದೇಶಿಸಿದೆ. 

ಪ್ರಧಾನ ಮಂತ್ರಿ ರನಿಲ್ ವಿಕ್ರಮ್ ಸಿಂಘೆ ಜೊತೆಗಿನ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ  ಚರ್ಚ್‌ಗಳ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದ್ದರೂ ಕೂಡಾ ಸರಣಿ ಸ್ಫೋಟ ತಡೆಯಲು ಅಂದಿನ ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಆಯೋಗವೊಂದನ್ನು ರಚಿಸೋದಕ್ಕೂ ಮೈತ್ರಿಪಾಲ ಸಿರಿಸೇನಾ ಹಿಂದೇಟು ಹಾಕಿದ್ದರು. ಆದರೆ, ಮೃತರ ಸಂಬಂಧಿಕರು ಹಾಗೂ ಕ್ಯಾಥೋಲಿಕ್ ಚರ್ಚ್‌ನ ಒತ್ತಡದ ಹಿನ್ನೆಲೆಯಲ್ಲಿ ಕೊನೆಗೂ ತನಿಖಾ ಆಯೋಗದ ರಚನೆಯಾಗಿತ್ತು. ಈ ಆಯೋಗವು ಮಾಜಿ ರಾಷ್ಟ್ರಪತಿಗಳನ್ನೇ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿತ್ತು. ಮಾಜಿ ರಾಷ್ಟ್ರಪತಿಗಳೇ ಈ ದಾಳಿಗೆ ಹೊಣೆ ಹೊರಬೇಕು ಎಂದು ಆಯೋಗ ಹೇಳಿತ್ತು. ಆದರೆ, ಸಿರಿಸೇನಾ ಅವರು ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು .

2019 ಏಪ್ರಿಲ್ 21 ರಂದು ಐಎಸ್ಐಎಸ್ ಗೆ ಸೇರಿದ ಸ್ಥಳೀಯ ಶ್ರೀಲಂಕಾದ ಸ್ಥಳೀಯ ಉಗ್ರಗಾಮಿ ಸಂಘಟನೆ ನ್ಯಾಷನಲ್ ತಹ್ವೀದ್ ಜಮಾತ್ (ಎನ್‌ಟಿಜೆ) ಸಂಘಟನೆಯ 9 ಆತ್ಮಾಹುತಿ ಬಾಂಬರ್ ಗಳು 3 ಚರ್ಚ್‌ಗಳು ಹಾಗೂ ಹಲವು ಐಷಾರಾಮಿ ಹೋಟೆಲ್‌ಗಳಲ್ಲಿ ಈ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಈ ಘಟನೆಯಲ್ಲಿ ಒಟ್ಟು 270 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.

SCROLL FOR NEXT