ವಿದೇಶ

ದೇವಸ್ಥಾನಕ್ಕೆ ಹಿಂದೂ ಭಕ್ತರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ 24 ಮಂದಿ ಸಾವು, ಹಲವರು ನಾಪತ್ತೆ

Nagaraja AB

ಢಾಕಾ: ಶತಮಾನಗಳಷ್ಟು ಹಳೆಯದಾದ ಬೋದೇಶ್ವರಿ ದೇವಸ್ಥಾನಕ್ಕೆ ಹಿಂದೂ ಭಕ್ತರನ್ನು ಸಾಗಿಸುತ್ತಿದ್ದ ದೋಣಿಯೊಂದು ಭಾನುವಾರ ಮಗುಚಿ ಬಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾಲಯ ಪ್ರಯುಕ್ತ ಪೂಜೆ ಸಲ್ಲಿಸಲು ಭಕ್ತರು ದೋಣಿಯಲ್ಲಿ ತೆರಳುತ್ತಿದ್ದಾಗ ಪಂಚಗಢ ಜಿಲ್ಲೆಯ ಕೊರೊಟಾ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅಪ್ರಾಪ್ತ ವಯಸ್ಸಿನ 8 ಮಕ್ಕಳು ಮತ್ತು 12 ಮಹಿಳೆಯರು ಸೇರಿದ್ದಾರೆ. ಅವರಲ್ಲಿ ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ಕರೆ ತಂದ ನಂತರ ಸಾವನ್ನಪ್ಪಿದ್ದಾರೆ.

ನಾಪತ್ತೆಯಾದವರಿಗಾಗಿ ಅಗ್ನಿಶಾಮಕ ದಳದವರು ಮತ್ತು ಸ್ಥಳೀಯ ಈಜುಪಟುಗಳಿಂದ ಹುಡುಕಾಟ ನಡೆಯುತ್ತಿದೆ ಎಂದು ಪಂಚಗಢ ಮುಖ್ಯ ಆಡಳಿತಾಧಿಕಾರಿ ಸೊಲೈಮಾನ್ ಅಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಯಾಣಿಕರ ಸಂಖ್ಯೆ 70 ರಿಂದ 80 ರ ನಡುವೆ ಇರಬಹುದೆಂದು ಊಹಿಸಲಾಗಿದೆ. ದೋಣಿ ತನ್ನ ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ಸಾಗಿಸುತಿತ್ತು ಎಂದು  ಪಂಚಗಢ್‌ನ ಉಪ ಆಯುಕ್ತ ಜಹುರುಲ್ ಹಕ್ ಹೇಳಿದ್ದಾರೆ.

SCROLL FOR NEXT