ಇಸ್ಲಾಮಿಕ್ ಉಗ್ರವಾದದ ವಿರುದ್ಧ ಮಾತನಾಡುತ್ತಿದ್ದ ಅಲ್ಲದೆ ತಮ್ಮ ಬರಹದ ಮೂಲಕ ಕಟು ಟೀಕೆ ಮಾಡುತ್ತಿದ್ದ ಪಾಕಿಸ್ತಾನಿ ಮೂಲದ ಖ್ಯಾತ ಬರಹಗಾರ ತಾರೆಕ್ ಫತಾಹ್ ನಿಧನರಾಗಿದ್ದಾರೆ.
73 ವರ್ಷದ ತಾರೆಕ್ ಫತಾಹ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ನಿಧನವನ್ನು ಅವರ ಪುತ್ರಿ ನತಾಶಾ ಖಚಿತಪಡಿಸಿದ್ದಾರೆ.
ಲಯನ್ ಆಫ್ ಪಂಜಾಬ್, ಸನ್ ಆಫ್ ಹಿಂದೂಸ್ತಾನ್, ಲವರ್ ಆಫ್ ಕೆನಡಾ, ಸ್ಪೀಕರ್ ಆಫ್ ಟ್ರೂಥ್, ಫೈಟರ್ ಫಾರ್ ಜಸ್ಟಿಸ್ ಎಂಬ ಪುಸ್ತಕಗಳನ್ನು ಬರೆದಿದ್ದ ತಾರೆಕ್ ಫತಾಹ್ ಈಗ ನಮ್ಮೊಂದಿಗಿಲ್ಲ ಎಂದು ನತಾಶಾ ಟ್ವೀಟ್ ಮಾಡಿದ್ದಾರೆ. ಭಾರತದ ಬಗೆಗಿನ ಅವರ ಉದಾರ ಮನೋಭಾವದಿಂದಾಗಿ ಅವರು ಇಲ್ಲಿನ ಜನರಲ್ಲಿ ಬಹಳ ಜನಪ್ರಿಯರಾಗಿದ್ದರು.
ತಾರೆಕ್ ಫತಾಹ್ ಅವರ ಕುಟುಂಬ ಮುಂಬೈನಲ್ಲಿ ವಾಸವಾಗಿತ್ತು. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಅವರ ಕುಟುಂಬವು ಪಾಕಿಸ್ತಾನದ ಕರಾಚಿಗೆ ಬಂದು ನೆಲೆಸಿತು. ತಾರೆಕ್ ಫತಾಹ್ ಅವರು 1949ರ ನವೆಂಬರ್ 20ರಂದು ಕರಾಚಿಯಲ್ಲಿ ಜನಿಸಿದರು. ಪ್ರಸಿದ್ಧ ಬರಹಗಾರ ತಾರೆಕ್ ಫತಾಹ್ ಕರಾಚಿ ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು. ಆದರೆ ನಂತರ ಅವರು ಪತ್ರಿಕೋದ್ಯಮವನ್ನು ತಮ್ಮ ವೃತ್ತಿಯನ್ನಾಗಿ ಮಾಡಿದ್ದರು.
ಪಾಕಿಸ್ತಾನಿ ಟಿವಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು 1970ರಲ್ಲಿ ಕರಾಚಿ ಸನ್ ಪತ್ರಿಕೆಯಲ್ಲಿ ವರದಿ ಮಾಡುತ್ತಿದ್ದರು. ತನಿಖಾ ಪತ್ರಿಕೋದ್ಯಮದಿಂದಾಗಿ ತಾರೆಕ್ ಫತಾಹ್ ಹಲವು ಬಾರಿ ಜೈಲಿಗೆ ಹೋಗಿದ್ದರು. ಆನಂತರ ಪಾಕಿಸ್ತಾನ ತೊರೆದು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅಲ್ಲಿಂದ ಅವರು 1987ರಲ್ಲಿ ಕೆನಡಾಕ್ಕೆ ಬಂದು ನೆಲೆಸಿದರು.
ತಾರೆಕ್ ಫತಾಹ್ ಅವರನ್ನು ಪಾಕಿಸ್ತಾನಿ ಮೂಲದ ಕೆನಡಾದ ಲೇಖಕ, ಪ್ರಸಾರಕ ಮತ್ತು ಜಾತ್ಯತೀತ ಉದಾರವಾದಿ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್ ಅವರ ಪ್ರಸಿದ್ಧ ಕೃತಿ. ಅವರು ಸಮಾನ ಹಕ್ಕುಗಳು ಮತ್ತು ಸಲಿಂಗಕಾಮಿ ವ್ಯಕ್ತಿಗಳ ಹಿತಾಸಕ್ತಿಗಳ ಪರವಾಗಿಯೂ ಇದ್ದರು. ಇದರೊಂದಿಗೆ ಬಲೂಚಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ಅವರು ಸಾಕಷ್ಟು ಬರೆದು ಮಾತನಾಡಿದ್ದಾರೆ. ಅವರು ಆಜಾದ್ ಬಲೂಚಿಸ್ತಾನದ ಬೆಂಬಲಿಗರೆಂದೂ ಕರೆಯಲ್ಪಡುತ್ತಿದ್ದರು.