ವಿದೇಶ

33 ವರ್ಷದ ಗೆಳತಿಗೆ 900 ಕೋಟಿ ರೂ. ಬಿಟ್ಟು ಹೋದ ಇಟಾಲಿಯ ಮಾಜಿ ಪ್ರಧಾನಿ

Srinivas Rao BV

ರೋಮ್: ಕಳೆದ ತಿಂಗಳು ಮೃತಪಟ್ಟ ಇಟಾಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ, 33 ವರ್ಷದ ತಮ್ಮ ಗೆಳತಿಗಾಗಿ 900 ಕೋಟಿ ರೂಪಾಯಿ (100ಮಿಲಿಯನ್ ಯುರೋ)ಗಳನ್ನು ನೀಡಬೇಕೆಂದು ವಿಲ್ ನಲ್ಲಿ ಬರೆದಿದ್ದಾರೆ. 

ಗಾರ್ಡಿಯನ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಮೂರು ಬಾರಿ ಇಟಾಲಿ ಪ್ರಧಾನಿಯಾಗಿದ್ದ ಸಿಲ್ವಿಯೋ ಬೆರ್ಲುಸ್ಕೋನಿ ಅವರು 6 ಬಿಲಿಯನ್ ಯೂರೋ ಗಳಷ್ಟು ಆಸ್ತಿ ಹೊಂದಿದ್ದಾರೆ. ಫಾಸ್ಕಿನಾ ಎಂಬುವವರು ಬೆರ್ಲುಸ್ಕೋನಿ ಅವರೊಂದಿಗೆ 2020 ರಿಂದ ನಿಕಟವಾಗಿದ್ದರು. ಫಾಸ್ಕಿನಾ ಅವರೊಂದಿಗೆ ಬೆರ್ಲುಸ್ಕೋನಿ ಅಧಿಕೃತವಾಗಿ ವಿವಾಹ ಆಗದೇ ಇದ್ದರೂ ಆಕೆಯನ್ನು ತಮ್ಮ ಕೊನೆಯ ದಿನಗಳಲ್ಲಿ ಪತ್ನಿ ಎಂದೇ ಹೇಳುತ್ತಿದ್ದರು.

ಫಾಸ್ಕಿನಾ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಟಾಲಿಯ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಬೆರ್ಲುಸ್ಕೋನಿ ಸ್ಥಾಪಿಸಿದ್ದ ಪೋರ್ಜಾ ಇಟಾಲಿಯಾ ಪಕ್ಷದ ಉಪಾಧ್ಯಕ್ಷರೂ ಆಗಿದ್ದಾರೆ. ಇನ್ನು ಉಯಿಲು ಪ್ರಕಾರ, ಸಿಲ್ವಿಯೋ ಬೆರ್ಲುಸ್ಕೋನಿ ಅವರ ಉದ್ಯಮಗಳನ್ನು ಅವರ ಹಿರಿಯ ಮಕ್ಕಳಾದ ಮರೀನಾ ಮತ್ತು ಪಿಯರ್ ಸಿಲ್ವಿಯೊ ಅವರು ನಿರ್ವಹಿಸಲಿದ್ದಾರೆ. ಈಗಾಗಲೇ ಉದ್ಯಮದಲ್ಲಿ ಕಾರ್ಯನಿರ್ವಾಹಕ ಪಾತ್ರಗಳನ್ನು ಹೊಂದಿರುವ ಇಬ್ಬರೂ ಫಿನ್ ಇನ್ವೆಸ್ಟ್ ಕುಟುಂಬದಲ್ಲಿ ಶೇ.53 ರಷ್ಟು ಪಾಲುದಾರಿಕೆ ಹೊಂದಿದ್ದಾರೆ.

ಸಿಲ್ವಿಯೋ ಬೆರ್ಲುಸ್ಕೋನಿ ತಮ್ಮ ಸಹೋದರ ಪಾವೊಲೊಗೂ 100 ಮಿಲಿಯನ್ ಯುರೋಗಳನ್ನು ನೀಡಿದ್ದು, ತಮ್ಮ ಪಕ್ಷಕ್ಕಾಗಿ ಸಂಕಷ್ಟದ ದಿನಗಳಲ್ಲಿ ಸೆರೆವಾಸ ಅನುಭವಿಸಿದ್ದ ಮಾಜಿ ಸೆನೆಟರ್  ಮಾರ್ಸೆಲ್ಲೊ ಡೆಲ್ ಉಟ್ರಿಗೆ 30 ಮಿಲಿಯನ್ ಯುರೋಗಳನ್ನು ಉಯಿಲಿನಲ್ಲಿ ಪ್ರಕಟಿಸಿದ್ದಾರೆ. 

SCROLL FOR NEXT