ವಿದೇಶ

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮೋದಿ ಬಳಿ ಪ್ರಸ್ತಾಪಿಸಿ: ಅಮೆರಿಕ ಅಧ್ಯಕ್ಷ ಬೈಡೆನ್ ಗೆ ಸಿಪಿಜೆ ಆಗ್ರಹ

Lingaraj Badiger

ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೂನ್ 21 ರಿಂದ 24 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ವೇಳೆ ಭಾರತದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿ ಎಂದು ಅಮೆರಿಕ ಅಧ್ಯಕ್ಷರಿಗೆ ಪತ್ರಕರ್ತರ ರಕ್ಷಣಾ ಸಮಿತಿ(ಸಿಪಿಜೆ) ಮನವಿ ಮಾಡಿದ್ದು, ಭಾರತದಲ್ಲಿ ಮಾಧ್ಯಮಗಳ ಮೇಲಿನ ದಬ್ಬಾಳಿಕೆಯನ್ನು ಕೊನೆಗಾಣಿಸಬೇಕು ಮತ್ತು ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡಲು ಮೋದಿಗೆ ಒತ್ತಾಯಿಸುವಂತೆ ಅಮೆರಿಕ ಸರ್ಕಾರವನ್ನು ಆಗ್ರಹಿಸಿದೆ. ತಮ್ಮನ್ನು ಪ್ರಶ್ನಿಸಿದ ಆರು ಪತ್ರಕರ್ತರನ್ನು ಮೋದಿ ಸರ್ಕಾರ ಬಂಧಿಸಿದೆ ಎಂದು ಸಿಪಿಜೆ ಹೇಳಿದೆ.

2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದ ಮಾಧ್ಯಮಗಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಸಿಪಿಜೆ ಅಧ್ಯಕ್ಷ ಜೋಡಿ ಗಿನ್ಸ್‌ಬರ್ಗ್ ಹೇಳಿದ್ದಾರೆ.

"ಮೋದಿ ಸರ್ಕಾರ ಮತ್ತು ಬಿಜೆಪಿ ಪಕ್ಷವನ್ನು ಟೀಕಿಸುವ ಪತ್ರಕರ್ತರನ್ನು ಜೈಲಿಗೆ ಹಾಕಿ, ಕಿರುಕುಳ ನೀಡಲಾಗುತ್ತಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಅಲ್ಲಿ ಮುಕ್ತ ಮತ್ತು ಸ್ವತಂತ್ರ ಮಾಧ್ಯಮವನ್ನು ಖಾತ್ರಿಪಡಿಸಬೇಕು. ಅಮೆರಿಕ ಸರ್ಕಾರ ಇದನ್ನು ಚರ್ಚೆಯ ಪ್ರಮುಖ ಅಂಶವನ್ನಾಗಿ ಪರಿಗಣಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎದು ಗಿನ್ಸ್ ಬರ್ಗ್ ತಿಳಿಸಿದ್ದಾರೆ.

SCROLL FOR NEXT