ವಿದೇಶ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಎರಡು ಗುಂಪುಗಳ ಮಧ್ಯೆ ಹಿಂಸಾಚಾರ: 16 ಮಂದಿ ಸಾವು

Sumana Upadhyaya

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ಜನರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕಲ್ಲಿದ್ದಲು ಗಣಿಯ ಗಡಿರೇಖೆಯ ವಿಷಯದಲ್ಲಿ ಕೋಹತ್ ಜಿಲ್ಲೆಯ ದರ್ರಾ ಆದಮ್ ಖೇಲ್ ಬುಡಕಟ್ಟು ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಕಳೆದ ರಾತ್ರಿ ವಿವಾದ ಉಂಟಾಗಿ ತೀವ್ರ ಘರ್ಷಣೆ ಏರ್ಪಟ್ಟಿತು ಎಂದು ಪೊಲೀಸ್ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಎರಡು ಬುಡಕಟ್ಟು ಗುಂಪುಗಳ ನಡುವಿನ ದೀರ್ಘಕಾಲದ ವಿವಾದದಿಂದಾಗಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಬುಡಕಟ್ಟು ಜನಾಂಗದವರನ್ನು ರಾಜಿ ಮಾಡಲು ಜಿರ್ಗಾ, ಸ್ಥಳೀಯ ಬುಡಕಟ್ಟು ನ್ಯಾಯಾಲಯದ ಹಲವಾರು ಸಭೆಗಳನ್ನು ನಡೆಸಿದರೂ ವಿಫಲವಾಗಿತ್ತು. 

ನಿನ್ನೆ ಮುಂಜಾನೆ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವಾಗ ಗುಂಪುಗಳು ಪರಸ್ಪರ ಮುಖಾಮುಖಿಯಾದಾಗ ಹಿಂಸಾಚಾರಕ್ಕೆ ತಿರುಗಿದವು. ಘಟನೆಯ ನಂತರ, ಪೊಲೀಸರು ಮತ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿವಾದಿತ ಕಲ್ಲಿದ್ದಲು ಗಣಿಯನ್ನು ಕಾನೂನು ಜಾರಿ ಸಂಸ್ಥೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ, ಕೆಲವು ಆರೋಪಿಗಳು ಗುಂಡು ಹಾರಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

SCROLL FOR NEXT