ವಿದೇಶ

ಪಾಕಿಸ್ತಾನ ವಾಯುನೆಲೆ ಮೇಲೆಯೇ ಉಗ್ರರ ದಾಳಿ: 9 ಭಯೋತ್ಪಾದಕರ ಹತ್ಯೆ

Manjula VN

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ವಾಯು ಪಡೆಯ ನೆಲೆ ಮೇಲೆ ಉಗ್ರರು ಶನಿವಾರ ದಾಳಿ ನಡೆಸಿದ್ದಾರೆ.

ಹಲವು ಆತ್ಮಾಹುತಿ ಬಾಂಬ್ ದಾಳಿಕೋರರು ಇಂದು ಬೆಳಿಗ್ಗೆ ವಾಯು ನೆಲೆಗೆ ನುಗ್ಗಿದ್ದಾರೆ. ಇದಕ್ಕೆ ಪ್ರತಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ 9 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ವಾಯು ಪಡೆ (ಪಿಎಎಫ್) ತಿಳಿಸಿದೆ.

ಭಾರಿ ಶಸ್ತ್ರಸಜ್ಜಿತರಾದ 5-6 ಮಂದಿ ಜನರ ಗುಂಪು ಶನಿವಾರ ಮುಂಜಾನೆ ತೀವ್ರ ಸ್ವರೂಪದ ದಾಳಿ ಆರಂಭಿಸಿದೆ. ಇದರಿಂದ ಎರಡೂ ಕಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ಘಟನೆಯನ್ನು ಖಚಿತಪಡಿಸಿರುವ ಪಿಎಎಫ್, ಉಗ್ರರು ವಾಯು ನೆಲೆ ಪ್ರವೇಶಿಸುವುದಕ್ಕೂ ಮುನ್ನವೇ ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದೆ.

"ನವೆಂಬರ್ 4, 2023ರ ಮುಂಜಾನೆ ಪಾಕಿಸ್ತಾನ ವಾಯು ಪಡೆಯ ಮಿಯಾನ್‌ವಾಲಿ ತರಬೇತಿ ವಾಯು ನೆಲೆಯು ವಿಫಲ ಭಯೋತ್ಪಾದನಾ ದಾಳಿಗೆ ಒಳಗಾಗಿದೆ. ಇದಕ್ಕೆ ಪಡೆಗಳು ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿದೆ. ಈ ಪ್ರಯತ್ನವನ್ನು ವಿಫಲಗೊಳಿಸಿದೆ ಮತ್ತು ತಡೆದು, ಸಿಬ್ಬಂದಿ ಹಾಗೂ ಆಸ್ತಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಗೊಳಿಸಿವೆ ಎಂದು ತಿಳಿಸಿದೆ.

ಅಸಾಧಾರಣ ಧೈರ್ಯ ಹಾಗೂ ಸಕಾಲಿಕ ಪ್ರತಿಕ್ರಿಯೆ ಪ್ರದರ್ಶಿಸುವ ಮೂಲಕ ಮೂವರು ಉಗ್ರರನ್ನು ವಾಯು ನೆಲೆ ಪ್ರವೇಶಿಸುವುದಕ್ಕೂ ಮುನ್ನವೇ ಹೊಡೆದುರುಳಿಸಲಾಗಿದೆ. ಸೇನಾ ಪಡೆಗಳ ಸಕಾಲಿಕ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ಕಾರಣದಿಂದ ಉಳಿದ ಇದೀಗ 6 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

ದಾಳಿಯಲ್ಲಿ, ವಾಯು ಪಡೆ ನೆಲೆಯ ಹೊರಗೆ ಇರಿಸಿದ್ದ ಮೂರು ವಿಮಾನಗಳಿಗೆ ಹಾನಿಯಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದನಾ ಗುಂಪು ತೆಹ್ರೀಕ್ ಇ ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

SCROLL FOR NEXT