ವಿದೇಶ

ಹಮಾಸ್ ಗಾಗಿ ಗಾಜಾದ ಮೂಲೆ ಮೂಲೆಯಲ್ಲೂ ಶೋಧ; ಉಗ್ರ ಮುಖಂಡನ ಮನೆಯನ್ನೇ ಬಾಂಬ್ ಇಟ್ಟು ಉಡಾಯಿಸಿದ ಇಸ್ರೇಲ್

Srinivasamurthy VN

ಟೆಲ್ ಅವೀವ್: ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಇಸ್ರೇಲ್ ಸೇನೆ ಗಾಜಾದ ಮೂಲೆ ಮೂಲೆಯಲ್ಲೂ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಏತನ್ಮಧ್ಯೆ ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆಯನ್ನೇ ಇಸ್ರೇಲ್ ವಾಯುಸೇನೆ ಬಾಂಬ್ ಹಾಕಿ ಉಡಾಯಿಸಿದೆ.

ಹೌದು.. ಹಮಾಸ್ ಉಗ್ರ ಸಂಘಟನೆಯ ಪ್ರಮುಖ ಉಗ್ರನೊಬ್ಬನ ಮನೆಯನ್ನೇ ಇಸ್ರೇಲ್‌ ಬಾಂಬಿಟ್ಟು ಧ್ವಂಸಗೊಳಿಸಿದೆ. ಈ ಸಿನಿಮೀಯ ವಿಡಿಯೊಗಳು (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹಮಾಸ್‌ ಪ್ರಮುಖ ಉಗ್ರ, ಹಮಾಸ್‌ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೇಹ್‌ ಎಂಬಾತನ ಮನೆಯನ್ನು ಇಸ್ರೇಲ್‌ ಸೇನೆಯು ಬಾಂಬಿಟ್ಟು ಧ್ವಂಸಗೊಳಿಸಿದೆ. “ಇಸ್ರೇಲ್‌ ಫೈಟರ್‌ ಜೆಟ್‌ಗಳು ಇಸ್ಮಾಯಿಲ್ ಹನಿಯೇಹ್‌ ಮನೆಯನ್ನು ಧ್ವಂಸಗೊಳಿಸಿವೆ” ಎಂದು ವಿಡಿಯೊಗಳ ಸಮೇತ ಇಸ್ರೇಲ್ ಡಿಫೆನ್ಸ್‌ ಫೋರ್ಸ್‌ ಪೋಸ್ಟ್‌ ಮಾಡಿದೆ.

ಮನೆ ಧ್ವಂಸಗೊಳಿಸಿದ ಬಳಿಕ ಇಸ್ರೇಲ್‌ ಸೈನಿಕರು ಆ ಮನೆಯನ್ನು ಶೋಧ ಮಾಡಿದ ವಿಡಿಯೊವನ್ನು ಕೂಡ ಹಂಚಿಕೊಳ್ಳಲಾಗಿದೆ. ಆದರೆ, ಇಸ್ಮಾಯಿಲ್ ಹನಿಯೇಹ್‌ ಹತ್ಯೆಗೀಡಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಹಮಾಸ್‌ ಉಗ್ರ ಸಂಘಟನೆಯ ಹಲವು ಮುಖಂಡರನ್ನು ಇಸ್ರೇಲ್‌ ಹತ್ಯೆಗೈದಿದೆ. 

ಉಗ್ರರಿಗಾಗಿ ತೀವ್ರ ಶೋಧ
ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ಮಾಡಿದ ಹಮಾಸ್‌ ಉಗ್ರರನ್ನು ನಿರ್ನಾಮ (Israel Palestine War) ಮಾಡುವ ಪಣತೊಟ್ಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ ಪ್ರತಿಯೊಂದು ಮೂಲೆಗಳಲ್ಲೂ ಆವರಿಸಿದ್ದಾರೆ. ಸುರಂಗಗಳಲ್ಲಿ ಅಡಗಿದರೂ ಉಗ್ರರನ್ನು (Hamas Terrorists) ಬಿಡುತ್ತಿಲ್ಲ.  

ಉಗ್ರರ ಪತ್ತೆಗೆ ಬುಲ್ಡೋಜರ್‌ ಬಳಕೆ
ಅಲ್‌-ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್‌ ಉಗ್ರರ ಸುರಂಗವಿದೆ. ಆಸ್ಪತ್ರೆ ಮೂಲಕ ಸುರಂಗದೊಳಗೆ ಹೋಗುವುದು, ಅಲ್ಲಿಂದ ಬರುವುದು, ಆಸ್ಪತ್ರೆಯಲ್ಲಿಯೇ ದಾಳಿಗೆ ಸಂಚು ರೂಪಿಸುವುದು ಸೇರಿ ಹಲವು ಕೃತ್ಯಗಳಲ್ಲಿ ಹಮಾಸ್‌ ಉಗ್ರರು ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ಉಗ್ರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಹಮಾಸ್‌ ಉಗ್ರರಿಗೆ ಇಸ್ರೇಲ್‌ ಗಡುವು ನೀಡಿತ್ತು. ಆದರೆ, ಹಮಾಸ್‌ ಉಗ್ರರು ಇದಕ್ಕೆ ಸೊಪ್ಪು ಹಾಕದ ಕಾರಣ ಭೀಕರವಾಗಿ ದಾಳಿ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಉಂಟಾಗಿರುವ ಸಾರ್ವಜನಿಕರ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

SCROLL FOR NEXT