ವಿದೇಶ

ಇಸ್ರೇಲ್-ಹಮಾಸ್ ಯುದ್ಧ: ಲಂಡನ್ ನಲ್ಲಿ ಪ್ಯಾಲೆಸ್ಟೀನಿಯರ ಪರ ಸಾವಿರಾರು ಪ್ರತಿಭಟನಾಕಾರರಿಂದ ಮೆರವಣಿಗೆ!

Nagaraja AB

ಲಂಡನ್: ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಅದರ ಅಲೆಗಳು ಜಗತ್ತಿನಾದ್ಯಂತ ಹರಡಿರುವ ಕಾರಣ, ಗಾಜಾ ಮೇಲಿನ ಬಾಂಬ್ ದಾಳಿಯನ್ನು ಇಸ್ರೇಲ್ ನಿಲ್ಲಿಸುವಂತೆ ಒತ್ತಾಯಿಸಿ  ಪ್ಯಾಲೆಸ್ಟೀನಿಯರ ಪರ ಸಾವಿರಾರು ಪ್ರತಿಭಟನಾಕಾರರು ಶನಿವಾರ ಲಂಡನ್ ಮತ್ತು ಇತರ ನಗರಗಳಲ್ಲಿ ಮೆರವಣಿಗೆ ನಡೆಸಿದರು.

ಯುದ್ಧದಿಂದಾಗಿ 1 ಮಿಲಿಯನ್‌ಗಿಂತಲೂ ಹೆಚ್ಚು ಗಾಜಾ ಜನರು ತಮ್ಮ ಮನೆಗಳನ್ನು ತೊರೆದಿದ್ದು, ಲಂಡನ್‌ನ ಹೈಡ್ ಪಾರ್ಕ್ ಬಳಿಯ ಮಾರ್ಬಲ್ ಆರ್ಚ್‌ನಲ್ಲಿ ಮಳೆಯನ್ನು ಲೆಕ್ಕಿಸದೇ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರಿ ಜಿಲ್ಲೆಯಾದ ವೈಟ್‌ಹಾಲ್‌ವರೆಗೂ ಮೆರವಣಿಗೆಯಲ್ಲಿ ಸಾಗಿದರು. 

ಪ್ಯಾಲೇಸ್ತೀನ್ ಧ್ವಜಗಳನ್ನು ಬೀಸುತ್ತಾ, ಇಸ್ರೇಲ್‌ನ ದಿಗ್ಬಂಧನವನ್ನು ಕೊನೆಗೊಳಿಸುವಂತೆ ಪ್ರತಿಭಟನಾಕಾರರು ಕರೆ ನೀಡಿದರು. ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ದ್ವೇಷಪೂರಿತ ಭಾಷಣ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ಬಹುತೇಕ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ. 

ಮತ್ತೊಂದೆಡೆ ಆಸ್ಟ್ರೇಲಿಯಾದ ಸೆಂಟ್ರಲ್ ಸಿಡ್ನಿಯಲ್ಲಿ, 'ಶೇಮ್ ಶೇಮ್ ಇಸ್ರೇಲ್' ಪ್ಯಾಲೆಸ್ತೀನ್ ಎಂದಿಗೂ ನಾಶವಾಗಲ್ಲ ಎಂದು ಕೂಗುತ್ತಾ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.  ಅಮೆರಿಕಾದ ನ್ಯೂಯಾರ್ಕ್, ಇಸ್ರೇಲ್ ನೆರೆಯ ಲೆಬನಾನ್, ಜೋರ್ಡಾನ್, ಟರ್ಕಿಯ ಅಂಕಾರ, ಇಸ್ತಾಂಬುಲ್, ಇಂಡೋನೇಷ್ಯಾ, ಮಲೇಷ್ಯಾ, ಮೊರಕ್ಕೊ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಜಗತ್ತಿನ ಹಲವೆಡೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಯುತ್ತಿದೆ. 

ಇತ್ತೀಚಿನ ಯುದ್ಧ ಪ್ರಾರಂಭವಾದಾಗಿನಿಂದ ಈ ಪ್ರದೇಶದಲ್ಲಿ 4,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಇಸ್ರೇಲ್‌ನಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT