ಬೀಜಿಂಗ್: ಚೀನಾದ ಮಾಜಿ ಪ್ರಧಾನಮಂತ್ರಿ, ದೇಶದ ಪ್ರಮುಖ ಆರ್ಥಿಕ ತಜ್ಞರಲ್ಲಿ ಒಬ್ಬರೆನಿಸಿದ್ದ ಲೀ ಕೆಕಿಯಾಂಗ್ (68) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಾಂಘೈನಲ್ಲಿ ಗುರುವಾರ (ಅಕ್ಟೋಬರ್ 26) ಲೀ ಕೆಕಿಯಾಂಗ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಶುಕ್ರವಾರ ಬೆಳಗಿನ ಜಾವ ಅವರು ಮೃತಪಟ್ಟಿದ್ದಾರೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಲೀ ಕೆಕಿಯಾಂಗ್ ಅವರು 2013-23ರವರೆಗೆ ಚೀನಾದ ಪ್ರಧಾನಿಯಾಗಿದ್ದರು. ಕಳೆದ ಮಾರ್ಚ್‌ನಲ್ಲಿ ಇವರ ಅಧಿಕಾರದ ಅವಧಿ ಮುಗಿತ್ತು. ಕ್ಸಿ ಜಿನ್‌ಪಿಂಗ್ ಅವರು ತಮ್ಮ ಅಧಿಕಾರ ಭದ್ರಗೊಳಿಸುವ ಹಾಗೂ ಆರ್ಥಿಕ ಮತ್ತು ಸಮಾಜಿಕ ವಲಯದಲ್ಲಿ ಪ್ರಬಲ ಅಧಿಕಾರ ಹೊಂದಿದ ಬಳಿ ಲೀ ಕೆಕಿಯಾಂಗ್ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು.
ಲೀ ಕೆಕಿಯಾಂಗ್ ಆರ್ಥಿಕ ತಜ್ಞರೂ ಆಗಿದ್ದು, ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವು ಆರ್ಥಿಕ ಸುಧಾರಣೆಗಳಿಗೂ ಮುನ್ನುಡಿ ಬರೆದಿದ್ದರು.
ಆರ್ಥಿಕ ಸುಧಾರಣೆಗಳು, ದಕ್ಷ ಆಡಳಿತ, ಸ್ಫುಟ ಇಂಗ್ಲಿಷ್‌ನಿಂದಲೇ ಲೀ ಕೆಕಿಯಾಂಗ್ ಅವರು ದೇಶದ ಗಮನ ಸೆಳೆದಿದ್ದರು. ಹು ಜಿಂಟಾವೋ ಅವರು ಚೀನಾ ಅಧ್ಯಕ್ಷರಾಗಿದ್ದಾಗ ಅವರಿಗೆ ಲೀ ಕೆಕಿಯಾಂಗ್ ಆಪ್ತರಾಗಿದ್ದರು.